ಮಂಗಳೂರು: ಪುತ್ತೂರು ತಾಲೂಕಿನ ಗ್ರಾಮವೊಂದರ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಆರ್ ಎಸ್ಎಸ್ ಮುಖಂಡನ ಮೇಲೆ ಎಫ್ಐಆರ್ ದಾಖಲಾಗಿದೆ. ಆದರೆ, ಈವರೆಗೆ ನೈಜ ಆರೋಪಿಯನ್ನು ಬಂಧಿಸಿಲ್ಲ. ಆದ್ದರಿಂದ ತಕ್ಷಣ ಆತನನ್ನು ಬಂಧಿಸಿ ಸಮಗ್ರ ತನಿಖೆ ನಡೆಸಿ ಬಾಲಕಿಗೆ ನ್ಯಾಯ ದೊರಕುವವರೆಗೆ ಹೋರಾಟ ನಡೆಸುವುದಾಗಿ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತ್ರಸ್ತ ಬಾಲಕಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನೀಡಿರುವ ದೂರಿನಲ್ಲಿ ಆರ್ ಎಸ್ಎಸ್ ಮುಖಂಡ ನಾರಾಯಣ ರೈ ಆತನ ತೋಟಕ್ಕೆ ಕೆಲಸಕ್ಕೆ ಹೋಗಿದ್ದ ಸಂದರ್ಭ ಒತ್ತಾಯಪೂರ್ವಕವಾಗಿ ತನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಪರಿಣಾಮ ತಾನು ಗರ್ಭವತಿಯಾಗಿ ಮಗುವಿಗೆ ಜನ್ಮ ನೀಡಿದ್ದೇನೆ. ಆದ್ದರಿಂದ ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಆದರೆ, ಈ ಕುರಿತು ಎಫ್‌ಐಆರ್ ದಾಖಲಾಗಿದ್ದರೂ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ, ಆಕೆ ಮ್ಯಾಜಿಸ್ಟ್ರೇಟ್ ಎದುರಿನಲ್ಲಿಯೂ ತಾನು ಆರೋಪಿ ನಾರಾಯಣ ರೈ ಹೆಸರು ಹೇಳಿರುವುದಾಗಿ ಬಾಲಕಿ ತಿಳಿಸಿದ್ದಾರೆ. ಇದೀಗ ಬಾಲಕಿಯು ನೈಜ ಆರೋಪಿಯೆಂದು ಹೆಸರಿಸಿರುವ ನಾರಾಯಣ ರೈ ವಿರುದ್ಧ ಪ್ರಕರಣ ದಾಖಲಾಗಿದೆ. ಆತ ಕೋರಿರುವ ಜಾಮೀನು ಅರ್ಜಿ ಕೂಡ ತಿರಸ್ಕೃತಗೊಂಡಿದೆ. ಹೀಗಿರುವಾಗ ಅತ್ಯಾಚಾರ, ದಲಿತ ದೌರ್ಜನ್ಯ, ಪೋಕ್ಸೋ ಪ್ರಕರಣದಡಿ ಆರೋಪಿಯನ್ನು ಬಂಧಿಸಿ ಸಮಗ್ರ ತನಿಖೆ ನಡೆಸಬೇಕು. ಆರೋಪಿಯನ್ನು ಡಿಎನ್‌ಎ ಪರೀಕ್ಷೆಗೊಳಪಡಿಸಬೇಕು. ಅಲ್ಲದೆ, ಅ.28ರೊಳಗೆ ಆರೋಪಿ ನಾರಾಯಣ ರೈಯನ್ನು ಬಂಧಿಸಬೇಕು. ಇಲ್ಲವಾದಲ್ಲಿ ಬಾಲಕಿಗೆ ನ್ಯಾಯ ದೊರೆಯುವವರೆಗೆ ಹೋರಾಟ ನಡೆಸಲಾಗುತ್ತದೆ ಎಂದು ಲುಕ್ಮಾನ್ ಹೇಳಿದರು.
Kshetra Samachara
25/10/2021 10:54 pm