ಮಂಗಳೂರು: ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈಯ್ಯುವವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವ ಕಾನೂನನ್ನು ಸರಕಾರ ಜಾರಿಗೊಳಿಸಲಿ. ನಾಲ್ಕು ಜನರಿಗೆ ಈ ರೀತಿಯ ಶಿಕ್ಷೆಯಾದಲ್ಲಿ ತನ್ನಷ್ಟಕ್ಕೆ ಇಂತಹ ಪ್ರಕರಣಗಳು ನಿಲ್ಲುತ್ತದೆ ಎಂದು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹೇಳಿದರು.
ನಗರಸ ಮಲ್ಲಿಕಟ್ಟೆಯಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರು ಸುರತ್ಕಲ್ ನ ಬಂಟ ಸಮುದಾಯದ ಯುವತಿಯೋರ್ವಳಿಗೆ ಮುಸ್ಲಿಂ ಯುವಕನೊಂದಿಗೆ ಸಂಬಂಧ ಇದೆ. ಆಕೆ 30 ವರ್ಷವಾದರೂ ಇನ್ನೂ ಮದುವೆಯಾಗಿಲ್ಲ ಎಂದಿದ್ದಾರೆ. ಹಾಗಾದರೆ ಚೈತ್ರಾ ಅವರದ್ದೇ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆಯವರು 55 ವರ್ಷವಾದರೂ ಯಾಕೆ ಮದುವೆಯಾಗಿಲ್ಲವೆಂದು ತಾವು ಪ್ರಶ್ನಿಸಿಲ್ಲ. ಸಾಧ್ಯವಾದರೆ ಚೈತ್ರ ಕುಂದಾಪುರ ಅವರು ಬಂಟ ಸಮುದಾಯದ ಯುವತಿಯನ್ನು ಪ್ರೀತಿಸುವ ಮುಸ್ಲಿಂ ಯುವಕನನ್ನು ತೋರಿಸಿಕೊಡಲಿ. ಅದು ಸಾಧ್ಯವಾಗದಿದ್ದಲ್ಲಿ ಸಾರ್ವಜನಿಕವಾಗಿ ಅವರು ದ.ಕ.ಜಿಲ್ಲೆಯ ಹೆಣ್ಣು ಮಕ್ಕಳ ಕ್ಷಮೆ ಯಾಚಿಸಲಿ. ಜೊತೆಗೆ ಚೈತ್ರಾ ಅವರು ಯಾರನ್ನು, ಯಾವಾಗ, ಎಷ್ಟು ವರ್ಷದೊಳಗೆ ಮದುವೆಯಾಗುತ್ತಾರೆಂದು ತಿಳಿಸಲಿ ಎಂದು ಸವಾಲೆಸೆದರು.
ಸೀತಾ, ಸಾವಿತ್ರಿ, ಗೀತಾ ಗಾಯತ್ರಿರಿದ್ದ ನಮ್ಮ ದೇಶದಲ್ಲಿ ಲಂಕಿಣಿ, ಶೂರ್ಪನಖಿಯರೂ ಇದ್ದರು. ನೀವು ಯಾವ ಪಂಗಡಕ್ಕೆ ಸೇರಿದವರೆಂದು ಮೊದಲು ತಿಳಿಸಿ. ಜೊತೆಗೆ ತಮಗೆ ಈ ರೀತಿಯ ಹಿಂದೂ ಪಾಠ ಯಾರು ಮಾಡಿದ್ದು ಎಂದೂ ತಿಳಿಸಿ. ಚೈತ್ರಾ ತುಳುನಾಡಿನ ಕ್ರಾಂತಿ ಪುರುಷರಾದ ಕೋಟಿ ಚೆನ್ನಯರ ಸುರಿಯವನ್ನು ತಲವಾರಿಗೆ ಹೋಲಿಸಿ ಮಾತನಾಡಿದ್ದಾರೆ. ಅವರಿಗೆ ಸುರಿಯಕ್ಕೂ ತಲವಾರಿಗೂ ಇರುವ ವ್ಯತ್ಯಾಸವೇ ತಿಳಿದಿಲ್ಲ. ಹಾಗಾಗಿ ಅವರಿಗೆ ಕರಾವಳಿಯ ಮಣ್ಣಿನ ಮಹತ್ವವೇ ತಿಳಿದಿಲ್ಲ. ಅವರ ಬುದ್ಧಿವಂತಿಕೆ ಕೇವಲ ಕರತಾಡನಕ್ಕೆ ಸೀಮಿತವಾಗಿದೆ. ಆದ್ದರಿಂದ ಅವರು ತಮ್ಮ ನಾಲಿಗೆ ಹರಿಯಬಿಡುವುದನ್ನು ಇನ್ನಾದರೂ ಜಾಗ್ರತೆ ಮಾಡಿಕೊಳ್ಳಲಿ ಎಂದು ಶಕುಂತಲಾ ಶೆಟ್ಟಿಯವರು ಹೇಳಿದರು.
Kshetra Samachara
19/10/2021 03:45 pm