ಉಡುಪಿ: ಅಫ್ಘಾನಿಸ್ತಾನದಲ್ಲಿರುವ ಕನ್ನಡಿಗರ ರಕ್ಷಣೆಗೆ ಸರಕಾರ ಗರಿಷ್ಠ ಪ್ರಯತ್ನ ಮಾಡುತ್ತಿದೆ ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಖಾತೆ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂಡಿಗೆ ಮಾತನಾಡಿದ ಅವರು, ಸಿಎಂ ಮತ್ತು ಗೃಹ ಸಚಿವರು ಬೇರೆಬೇರೆ ಹಂತಗಳಲ್ಲಿ ಸಭೆ ನಡೆಸಿದ್ದಾರೆ. ಕನ್ನಡಿಗರ ರಕ್ಷಣೆಗೆ ಸರಕಾರ ಗರಿಷ್ಠ ಪ್ರಯತ್ನ ಮಾಡುತ್ತಿದೆ. ರಾಜತಾಂತ್ರಿಕ ವಲಯ ಈ ನಿಟ್ಟಿನಲ್ಲಿ ಸಕ್ರಿಯವಾಗಿದೆ ಎಂದರು.
ತಾಲಿಬಾನಿಗಳ ಕೃತ್ಯ ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿಯಾಗಿದ್ದು, ತಾಲಿಬಾನಿನ ಮಾನಸಿಕತೆ ಯಾವ ರೀತಿ ಇದೆ ಅನ್ನೋದು ಗೊತ್ತಾಗುತ್ತಿದೆ. ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನಯಾಗುತ್ತಿದ್ದು ಮಕ್ಕಳು ಮಹಿಳೆಯರಿಗೆ ರಕ್ಷಣೆಯಿಲ್ಲ. ಎಲ್ಲ ಕಾನೂನು ಗಾಳಿಗೆ ತೂರಿ ತಮ್ಮದೇ ವಿಚಿತ್ರ ಕಾನೂನು ರೂಪಿಸಲು ಹೊರಟಿದ್ದಾರೆ ಎಂದು ಹೇಳಿದ್ದಾರೆ.
ಭಯೋತ್ಪಾದನಾ ಚಟುವಟಿಕೆ ಜಗತ್ತಿಗೆ ಎಚ್ಚರಿಕೆಯ ಗಂಟೆ ಎಂದು ಹೇಳಿದ ಸಚಿವರು, ಜಗತ್ತಿನ ಎಲ್ಲ ರಾಷ್ಟ್ರಗಳು ಈ ಬಗ್ಗೆ ಆಲೋಚಿಸಬೇಕು. ಈ ರೀತಿಯ ಹಿಂಸಾಕೃತ್ಯ ತಾತ್ಕಾಲಿಕ ಎಂದು ಪ್ರಧಾನಿ ಹೇಳಿದ್ದಾರೆ. ಜಗತ್ತಿನ ಎಲ್ಲಾ ರಾಷ್ಟ್ರಗಳು ಒಂದಾಗಬೇಕು. ನಿಧಾನವಾಗಿ ಬೇರೆ ಕಡೆಗೂ ಇದು ವ್ಯಾಪಿಸುವ ಅಪಾಯವಿದೆ. ಭಾರತವು ಅತ್ಯಂತ ಎಚ್ಚರಿಕೆಯಿಂದ ಇರಬೇಕಾಗಿದೆ. ನಮ್ಮ ಯುವಕರ ದಿಕ್ಕುತಪ್ಪಿಸಿ ತಾಲಿಬಾನಿನ ಶಿಕ್ಷಣ ನೀಡುವ ಅಪಾಯ ಇದೆ. ಈ ಪ್ರವೃತ್ತಿ ಕೆಲ ರಾಜ್ಯಗಳಲ್ಲಿ, ಜಿಲ್ಲೆಗಳಲ್ಲಿ ನಡೆಯುತ್ತಿವೆ. ತಾಲಿಬಾನಿನ ಆಡಳಿತ ಯಾವ ರೀತಿ ಇರುತ್ತೆ? ಎಂದು ಬಿಜೆಪಿ ಮೊದಲೇ ಹೇಳಿತ್ತು.ಇವತ್ತು ಪ್ರತ್ಯಕ್ಷವಾಗಿ ಅಪಘಾನಿಸ್ತಾನದಲ್ಲಿ ಅದು ನೋಡಲು ಸಿಗುತ್ತಿದೆ. ಈ ರೀತಿಯ ಶಕ್ತಿಗಳನ್ನು ಯಾವ ಕಾರಣಕ್ಕೂ ವೈಭವೀಕರಿಸಬಾರದು ಎಂದು ಹೇಳಿದ್ದಾರೆ.
Kshetra Samachara
21/08/2021 04:06 pm