ಕೋಟ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರಕಾರದ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಮಂತ್ರಿಯಾಗಿ ಕೋಟ ಶ್ರೀನಿವಾಸ ಪೂಜಾರಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಈ ಸಂದರ್ಭ ಹುಟ್ಟೂರು ಕೋಟದಲ್ಲಿ ಸಂಭ್ರಮ ಮನೆಮಾಡಿತ್ತು.
ಕಾರ್ಯಕರ್ತರು ಅಭಿಮಾನಿಗಳು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು. ಪೂಜಾರಿಯವರ ಪತ್ನಿ ಶಾಂತ ಶ್ರೀನಿವಾಸ ಪೂಜಾರಿ ಅವರು ಕೋಟದ ತನ್ನ ಮನೆಯಲ್ಲಿ ಪುತ್ರಿಯರಾದ ಸ್ವಾತಿ, ಶ್ರುತಿಯೊಂದಿಗೆ ಟಿವಿ ಮೂಲಕ ಪ್ರಮಾಣವಚನ ಸ್ವೀಕಾರ ಕ್ಷಣವನ್ನು ಕಣ್ತುಂಬಿಕೊಂಡರು.
ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನನ್ನ ಪತಿ ಈಗಾಗಲೇ ಮಂತ್ರಿಯಾಗಿ ಒಳ್ಳೆ ಕೆಲಸ ಮಾಡಿದ್ದಾರೆ. ಅವರ ಕಾರ್ಯಾವೈಖರಿಯನ್ನು ಗುರುತಿಸಿ ಪಕ್ಷ ಮತ್ತೊಮ್ಮೆ ಜವಬ್ದಾರಿ ನೀಡಿದೆ ಹಾಗೂ ಈ ಬಾರಿ ಕೂಡ ಉತ್ತಮ ಕೆಲಸಗಳನ್ನು ಮಾಡುತ್ತಾರೆ ಎಂದರು.
ಶ್ರೀನಿವಾಸ ಪೂಜಾರಿಯವರ ತಾಯಿ 94 ವರ್ಷದ ಲಚ್ಚಿ ಪೂಜಾರಿ ಅವರು ಬಾರಿಕೆರೆಯಲ್ಲಿರುವ ಮೂಲಮನೆಯಲ್ಲಿ ವಾಸವಾಗಿದ್ದು, ತನ್ನ ಪುತ್ರಿ ಕಮಲ ಹಾಗೂ ಮೊಮ್ಮಗ ರಾಘವೇಂದ್ರ ಪೂಜಾರಿಯವರೊಂದಿಗೆ ಟಿವಿ ಮೂಲಕ ಪ್ರಮಾಣವಚನ ಸ್ವೀಕಾರ ಕ್ಷಣವನ್ನು ಕಣ್ತುಂಬಿಕೊಂಡರು. "ನನ್ನ ಮಗ ಮೂರನೇ ಸಲ ಮಂತ್ರಿ ಆದ್ ಭಾರೀ ಖುಷಿಯಾಯ್ತ್; ದೇವ್ರ್ ಅವನಿಗೆ ಇನ್ನೂ ಒಳ್ಳೆದ್ ಮಾಡ್ಲಿ; ಇನ್ನೂ ಹೆಚ್ಚಿನ ಕೆಲಸ ಮಾಡು ತಾಕತ್ ಕೊಡ್ಲಿ" ಎಂದು ಲಚ್ಚಿ ಅಜ್ಜಿ ಹಾರೈಸಿದರು.
ಅಭಿಮಾನಿಗಳು ಕೋಟ ಪೇಟೆಯಲ್ಲಿ ಪಟಾಕಿ ಸಿಡಿಸಿ, ಜೈಕಾರ ಕೂಗಿ ಸಂಭ್ರಮಾಚರಿಸಿದರು.
Kshetra Samachara
04/08/2021 08:37 pm