ಕುಂದಾಪುರ: ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಮಂತ್ರಿಸ್ಥಾನ ಕೊಡಬೇಕು ಎಂಬ ಕೂಗು ಜೋರಾಗಿದೆ.ಶೆಟ್ಟರ ಅಭಿಮಾನಿಗಳು ಯಡಿಯೂರಪ್ಪನವರಿಗೆ ನೇರ ಪತ್ರ ಬರೆದಿದ್ದಾರೆ. ನಾನು ಬೆಂಗಳೂರಿಗೆ ಹೋಗಿ ಮಂತ್ರಿಸ್ಥಾನ ಕೇಳುವುದಿಲ್ಲ, ನನ್ನ ಉಸಿರು ಇರೋ ತನಕ ನಾನು ಕಾಡಿಬೇಡಿ ಮಂತ್ರಿಯಾಗುವುದಿಲ್ಲ ಎಂದು ಹಾಲಾಡಿ ಶ್ರೀನಿವಾಸ್ ಶೆಟ್ಟಿ ಸ್ಪಷ್ಟಪಡಿಸಿದ್ದರು.
ಈ ನಡುವೆಯೂ ಹಾಲಾಡಿಯವರ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಪತ್ರ ಅಭಿಯಾನ ನಡೆಸುತ್ತಿದ್ದಾರೆ.
ಯಡಿಯೂರಪ್ಪ ಅವರಿಗೆ ಬರೆದ ಪತ್ರದಲ್ಲಿ ಹಳೆಯ ನೆನಪುಗಳನ್ನು ಕೆದಕಿದ್ದಾರೆ. ಬೆಂಗಳೂರಿಗೆ ಕರೆಸಿ ಮಂತ್ರಿ ಸ್ಥಾನ ತಪ್ಪಿದಾಗ ಯಡಿಯೂರಪ್ಪ ಮಾತುಕತೆ ಮಾಡಿ ಸಿಹಿಸುದ್ದಿ ಕೊಡುವುದಾಗಿ ಹೇಳಿದ್ದರು. ಅದನ್ನು ಯಾಕೆ ಮರೆತಿದ್ದೀರಿ? ನೀವು ಕಿಂಗ್ ಮೇಕರ್ . ಸದಾನಂದಗೌಡ,ಜಗದೀಶ್ ಶೆಟ್ಟರ್ , ಬೊಮ್ಮಾಯಿಯವರನ್ನು ಸಿಎಂ ಮಾಡಿದ್ದೀರಿ. ಹಾಲಾಡಿಯನ್ನು ಮಂತ್ರಿ ಮಾಡಬೇಕೆಂದು ಅನ್ನಿಸಲಿಲ್ಲವೇ? ಕೋಟ ಶ್ರೀನಿವಾಸ ಪೂಜಾರಿಗೆ ಮಂತ್ರಿ ಸ್ಥಾನ ಕೊಟ್ಟದ್ದು ಯಾಕೆ ಎಂಬುದನ್ನು ನಾವು ಇನ್ನೂ ಮರೆತಿಲ್ಲ.
ಶೋಭಾ ಕರಂದ್ಲಾಜೆಗೆ ಹಾಲಾಡಿ ಕ್ಷೇತ್ರದಲ್ಲಿ ಅತಿ ಹೆಚ್ಚು ಲೀಡ್ ಕೊಡಿಸಿದ್ದು ನಿಮಗೆ ಮರೆತುಹೋಯಿತೆ? ಹಾಲಾಡಿ ಜಿಲ್ಲೆಯ ಏಕೈಕ ಶಾಸಕರಾಗಿದ್ದ ದಿನಗಳನ್ನು ನೀವು ಮರೆಯಬೇಡಿ. ಪಕ್ಷೇತರರಾಗಿದ್ದಾಗ ನಿರ್ಮಲಾ ಸೀತಾರಾಮನ್ ಗೆ ಮತ ಹಾಕಿದ್ದು ನಿಮಗೆ ನೆನಪಿಲ್ಲವೇ? ಹಾಲಾಡಿಗೆ ಸಚಿವ ಸ್ಥಾನ ಸಿಗದಿದ್ದರೆ ನಮಗೆ ಬೇಸರವಿಲ್ಲ , ಆದರೆ ಲಕ್ಷಾಂತರ ಮಂದಿಯ ಶಾಪ ನಿಮಗೆ ತಟ್ಟಲಿದೆ ಎಂದು ಅಭಿಮಾನಿಗಳು ಕಿಡಿಕಾರಿದ್ದಾರೆ. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Kshetra Samachara
03/08/2021 04:44 pm