ವರದಿ: ಸಂದೇಶ್ ಶೆಟ್ಟಿ ಆಜ್ರಿ ಪಬ್ಲಿಕ್ ನೆಕ್ಸ್ಟ್ ಉಡುಪಿ
ಉಡುಪಿ: ಹುಟ್ಟಿಸಿದ ದೇವರಿಗೆ ಜಾತಿಯಿಲ್ಲ ಧರ್ಮವಿಲ್ಲ, ಆದರೆ ಒಂದಿಷ್ಟು ಸಂಪ್ರದಾಯ ಪದ್ಧತಿಗಳನ್ನು ಹಿಂದೆ ಹಿರಿಯರು ಇಂದಿನ ಪೀಳಿಗೆಗೆ ಬಿಟ್ಟುಹೋಗಿದ್ದಾರೆ. ಶಿವನ ಆರಾಧಕರು, ವಿಷ್ಣುವಿನ ಆರಾಧಕರು ಹಾಗೂ ಇನ್ನೂ ಅನೇಕ ದೈವ-ದೇವರುಗಳ ಆರಾಧಕರು ಅನುಸಾರವಾಗಿ ದೇವರಿಗೆ ಹಿಂದೂ ಸಂಪ್ರದಾಯದಲ್ಲಿ ಅವರ ಪದ್ದತಿಯಲ್ಲಿ ಪೂಜೆಯನ್ನು ಮಾಡಿಕೊಂಡು ಬಂದಿದ್ದಾರೆ. ಆದರೆ ಉಡುಪಿಯಲ್ಲಿ ಶಿವರಾತ್ರಿ ಮಹೋತ್ಸವದ ಪೂಜೆಯ ವಿಚಾರವಾಗಿ ಶೈವ ಮತ್ತು ವೈಷ್ಣವರ ನಡುವೆ ಹೊಸ ತಿಕ್ಕಾಟ ಇದೀಗ ಏರ್ಪಟ್ಟಿದೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯಬೇಕಾಗಿರುವ ಶಿವರಾತ್ರಿ ಮಹೋತ್ಸವವು ಶೈವ ಮತ್ತು ವೈಷ್ಣವ ಸಂಪ್ರದಾಯಗಳ ನಡುವಿನ ತಿಕ್ಕಾಟಕ್ಕೆ ವೇದಿಕೆಯಾಗಿದೆ.
ಸುಬ್ರಮಣ್ಯ ದೇವಸ್ಥಾನದ ಹಿತರಕ್ಷಣಾ ಸಮಿತಿಯು ಶೈವ ಪದ್ಧತಿಯ ಪೂಜಾ ಕ್ರಮಕ್ಕೆ ಆಗ್ರಹಿಸಿ ರುವುದನ್ನು ಉಡುಪಿಯ ಮಾಧ್ವ ಸಂಪ್ರದಾಯವನ್ನು ಪಾಲಿಸುವ ಬ್ರಾಹ್ಮಣರು ವಿರೋಧಿಸಿದ್ದಾರೆ. ಶೈವ ಪದ್ಧತಿಯಲ್ಲಿ ಪೂಜೆ ವಿಧಿ ವಿಧಾನಗಳನ್ನು ಮಾಡಿದ್ದಲ್ಲಿ ತಮ್ಮ ಸಂಪ್ರದಾಯಕ್ಕೆ ಚ್ಯುತಿ ಆಗುತ್ತೆ ಎಂದು ಕಿಡಿಕಾರಿದ್ದಾರೆ.
ಶೈವ ಮತ್ತು ವೈಷ್ಣವರ ಪದ್ಧತಿಯ ಹೊಸದೊಂದು ಆಯಾಮ ಇದೀಗ ತೆರೆದುಕೊಂಡಂತೆ ಕಾಣುತ್ತಿದೆ,ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶೈವ ಮತ್ತು ಮಾಧ್ವರ ನಡುವಿನ ಕಚ್ಚಾಟಕ್ಕೆ ಹೊಸ ವೇದಿಕೆ ಸಿದ್ಧವಾಗಿದೆ. ಶತಮಾನಗಳ ಹಿಂದೆ ಈ ಕ್ಷೇತ್ರದಲ್ಲಿ ಶೈವಾಗಮದ ಪ್ರಕಾರವೇ ಪೂಜೆ ನಡೆಯುತ್ತಿತ್ತು. ಶೈವ ಪದ್ಧತಿಯನ್ನು ಅನುಸರಿಸುವ ಶೃಂಗೇರಿ ಮಠದ ವ್ಯಾಪ್ತಿಗೆ ಈ ಕ್ಷೇತ್ರ ಒಳಪಟ್ಟಿತ್ತು. ಮಾಧ್ವರ ಪ್ರಭಾವ ಹೆಚ್ಚಾದ ನಂತರ, ಹಳೆಯ ಸಂಪ್ರದಾಯಕ್ಕೆ ತಿಲಾಂಜಲಿ ನೀಡಿ ತಂತ್ರಸಾರ ಆಗಮದ ಪ್ರಕಾರ, ವೈಷ್ಣವ ಪದ್ದತಿಯಂತೆ ಪೂಜಾವಿಧಾನ ಆರಂಭವಾಯ್ತು . ಆದರೆ ಮೂಲ ಪದ್ದತಿಯಲ್ಲೇ ಆರಾಧನೆ ನಡೆಯಬೇಕು ಎಂದು ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ದೇವಸ್ಥಾನ ಹಿತರಕ್ಷಣಾ ಸಮಿತಿ ಆಗ್ರಹಿಸಲಾರಂಭಿಸಿದೆ.
2007 ರಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲೂ ಶೈವಾಗಮ ಪೂಜೆ ನಡೆಯಬೇಕೆಂದು ಆದೇಶವಾಗಿದೆ ಅನ್ನೋದು ಸಮಿತಿಯ ವಾದ. ಹಾಗಾಗಿ ಈ ಬಾರಿ ಶಿವರಾತ್ರಿಯ ದಿನ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಶೈವಾಗಮ ಪ್ರಕಾರ ರುದ್ರ ಪಾರಾಯಣ, ಭಸ್ಮಾರ್ಚನೆ, ಜಾಗರಣೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಹಿತರಕ್ಷಣಾ ಸಮಿತಿ ಮುಜರಾಯಿ ಇಲಾಖೆಗೆ ಮನವಿ ಸಲ್ಲಿಸಿದೆ. ಇದು ಮಾಧ್ವರ ನ್ನು ಕೆರಳಿಸಿದೆ, ಮಾಧ್ವಸಂಪ್ರದಾಯದ ಮೂಲ ಕೇಂದ್ರವಾದ ಉಡುಪಿಯಲ್ಲಿ ಸೇರಿದ ಮಾಧ್ವ ಪಂಡಿತರು,‘ ಸಂಪ್ರದಾಯ ಬದಲಿಸಬೇಡಿ’ ಎಂದು ಆಗ್ರಹಿಸಿದ್ದಾರೆ. ಸನಾತನ ಸಂಪ್ರದಾಯ ಸಂರಕ್ಷಣಾ ಸಮಿತಿಯ ಪ್ರಮುಖರು ಮಾತನಾಡಿ, ಹಳೆಯ ಸಂಪ್ರದಾಯವನ್ನು ಉಳಿಸಿ. ಅಷ್ಟ ಮಂಗಲ ದಲ್ಲಿ ತೋರಿಬಂದಿರೋದೆಲ್ಲಾ ಸತ್ಯವಾಗಿರಲು ಸಾಧ್ಯವಿಲ್ಲ ಎಂದಿದೆ. ಇದನ್ನೆಲ್ಲಾ ಗಮನಿಸುವ ಸಾಮಾನ್ಯ ಜನ ಇನ್ನುಮುಂದೆ ಅಷ್ಟಮಂಗಲ ಪ್ರಶ್ನೆಯನ್ನು ಕೂಡ ಪ್ರಶ್ನೆ ಮಾಡುವ ರೀತಿಯಲ್ಲಿ ಮನಸ್ಥಿತಿಯಲ್ಲಿ ಮೈಗೂಡಿಸಿಕೊಳ್ಳುತ್ತಾರೆ ಅನ್ನುವುದು ಕೂಡ ಇಲ್ಲಿ ದೊಡ್ಡ ಪ್ರಶ್ನೆಯಾಗಿದೆ.
ಸುಬ್ರಹ್ಮಣ್ಯ ಸ್ವಾಮಿಯ ತಂದೆ ಈಶ್ವರ ದೇವರು. ಹಾಗಾಗಿ ಶಿವರಾತ್ರಿಯನ್ನು ಶೈವಾಗಮದಲ್ಲೇ ನಡೆಸದಿದ್ದರೆ ಅಪಚಾರವಾಗುತ್ತೆ ಅನ್ನೋದು ಸುಬ್ರಹ್ಮಣ್ಯ ಭಕ್ತರ ಆರೋಪ. ಆದರೆ ಉಡುಪಿಯ ಬ್ರಾಹ್ಮಣರು ಹೇಳುವಂತೆ ಪೂಜೆಯಲ್ಲಿ ಅಪಚಾರ ವಾಗಿದ್ದರೆ ಗ್ರಾಮದ ಜನರಿಗೆ ತೊಂದರೆ ಬರಬೇಕಿತ್ತು. ಅನಾಹುತಗಳು ಸಂಭವಿಸಬೇಕಿತ್ತು. ಕಳೆದ ಏಳು ಶತಮಾನಗಳಿಂದ ಯಾವುದೇ ತೊಂದರೆಯಾಗಿಲ್ಲ ವೆಂದರೆ ಪೂಜಾಪದ್ಧತಿ ಸರಿಯಾಗಿದೆ ಎಂದೇ ಅರ್ಥ ಎಂಬ ವಾದ ಮಂಡಿಸುತ್ತಾರೆ. ಮಾಧ್ವರು ಈ ದೇವಸ್ಥಾನವನ್ನು ಅತಿಕ್ರಮಣ ಮಾಡಿಲ್ಲ; 700 ವರ್ಷಗಳ ಹಿಂದೆ ಕ್ಷೇತ್ರದಲ್ಲಿ ಕ್ರಮಬದ್ಧ ಪೂಜೆ ನಡೆಯದೇ ಇದ್ದಾಗ ಮಧ್ವಾಚಾರ್ಯರು ತಮ್ಮ ಸಹೋದರರಾದ ವಿಷ್ಣುತೀರ್ಥ ರನ್ನು ನಿಯೋಜಿಸಿ ಪೂಜಾಕ್ರಮ ಸರಿಪಡಿಸಿದರು ಹಾಗಾಗಿ ಇರುವ ಕ್ರಮವನ್ನೇ ಮುಂದುವರಿಸಬೇಕು ಈ ರೀತಿಯ ಬದಲಾವಣೆಗಳಿಂದ ಭಕ್ತರಲ್ಲಿ ಗೊಂದಲ ಉಂಟಾಗುತ್ತದೆ. ಸಂಪ್ರದಾಯಕ್ಕೆ ಚ್ಯುತಿಯಾಗುತ್ತೆ, ಶೈವಾಗಮ ಪ್ರಕಾರ ಪೂಜೆ ನಡೆಸಲು ನಾವು ಒಪ್ಪುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಮಡೆಸ್ನಾನದಿಂದ ವಿವಾದದ ಕೇಂದ್ರಬಿಂದುವಾಗಿದ್ದ ಕುಕ್ಕೆ ಸುಬ್ರಮಣ್ಯ ಕ್ಷೇತ್ರ, ಶಿವರಾತ್ರಿ ಸಂದರ್ಭದಲ್ಲಿ ಮತ್ತೊಂದು ವಿವಾದಕ್ಕೆ ವೇದಿಕೆಯಾಗಲಿದೆ. ಒಂದಿಷ್ಟು ಸಂಪ್ರದಾಯ ತಮ್ಮ ಅನುಕೂಲಕ್ಕಾಗಿ ಮಾಡಿಕೊಳ್ಳುವ ನಿಟ್ಟಿನಲ್ಲಿ ವ್ಯವಸ್ಥೆಯನ್ನ ತನ್ನ ಮೈಗೂಡಿಸಿಕೊಳ್ಳುತ್ತಿರುವುದು ಹೊತ್ತಿನಲ್ಲಿ ಸಾಮಾನ್ಯ ಜನಕ್ಕೆ ಇದು ದೊಡ್ಡ ತಲೆನೋವು ಉಂಟುಮಾಡಿದೆ,ಸದ್ಯ ಚೆಂಡು ಮುಜರಾಯಿ ಇಲಾಖೆಯ ಅಂಗಣದಲ್ಲಿದೆ. ಮುಂದೇನಾಗುತ್ತೋ ಶಿವನೇ ಬಲ್ಲ!.
Kshetra Samachara
28/02/2021 03:07 pm