ಬಂಟ್ವಾಳ: ೨೦೨೧-೨೨ನೇ ಸಾಲಿನಿಂದ ಆಸ್ತಿ ತೆರಿಗೆಯನ್ನು ಈ ಸಾಲಿನ ಮಾರುಕಟ್ಟೆ ಮಾರ್ಗಸೂಚಿ ಬೆಲೆಯ ಆಧಾರದಲ್ಲಿ ಖಾಲಿ ಭೂಮಿಗೆ ತೆರಿಗೆ ವಿಧಿಸುವ ಸರಕಾರದ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದ ಬಂಟ್ವಾಳ ಪುರಸಭೆಯ ಸದಸ್ಯರು ಯಾವುದೇ ಕಾರಣಕ್ಕೂ ಈ ಕುರಿತು ನಿರ್ಣಯ ತೆಗೆದುಕೊಳ್ಳಬಾರದು ಎಂದು ಆಗ್ರಹಿಸಿದ್ದಾರೆ.
ಅಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ಉಪಾಧ್ಯಕ್ಷೆ ಜೆಸಿಂತಾ ಡಿಸೋಜ, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಉಪಸ್ಥಿತಿಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ತೆರಿಗೆ ಪರಿಷ್ಕರಣೆಯ ವಿಷಯ ಬಂದಾಗ ಸದಸ್ಯರು ಬಲವಾದ ಆಕ್ಷೇಪ ವ್ಯಕ್ತಪಡಿಸಿದರು.
ಪರವಾನಗಿ ಇಲ್ಲದೆ ಮನೆ ಕಟ್ಟಿಕೊಂಡವರಿಗೆ ಡಬ್ಬಲ್ ಟ್ಯಾಕ್ಸ್ನಲ್ಲಿ ಡೋರ್ ನಂಬರ್ ನೀಡುವ ಕುರಿತು ನಿರ್ಣಯವಾದರೂ ಯಾಕೆ ಅನುಷ್ಠಾನಗೊಂಡಿಲ್ಲ ಎಂದು ಸದಸ್ಯ ಅಬೂಬಕ್ಕರ್ ಸಿದ್ದೀಕ್ ಪ್ರಶ್ನಿಸಿದರು. ಜಿಲ್ಲಾಧಿಕಾರಿಗಳಿಗೆ ಇದನ್ನು ಬರೆಯುವುದಾಗಿ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ತಿಳಿಸಿದಾಗ, ಸದಸ್ಯರಾದ ಮುನೀಶ್ ಆಲಿ ಹಾಗೂ ಲುಕ್ಮಾನ್ ಬಂಟ್ವಾಳ ಬಲವಾಗಿ ಆಕ್ಷೇಪಿಸಿದರು. ಈ ರೀತಿ ಡೋರ್ ನಂಬರ್ ನೀಡುವುದಕ್ಕೆ ನಮ್ಮ ವಿರೋಧವಿದೆ ಎಂದು ಗೋವಿಂದ ಪ್ರಭು ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಪತ್ರದ ಮೂಲಕ ತಿಳಿಸಿದರು. ಬಿ.ಸಿ.ರೋಡಿನಲ್ಲಿ ನಿರ್ಮಾಣಗೊಂಡಿರುವ ಕನ್ನಡ ಭವನಕ್ಕೆ ಅನುದಾನ ನೀಡುವಂತೆ ಕಸಾಪ ಅಧ್ಯಕ್ಷ ಮಾಡಿರುವ ಮನವಿಯನ್ನು ಪುರಸ್ಕರಿಸಿ ೨೫ ಸಾವಿರ ರೂ.ನೀಡಲು ಸದಸ್ಯರು ಒಪ್ಪಿಗೆ ಸೂಚಿಸಿದರು. ಪೌರ ಕಾರ್ಮಿಕರು ಜಾತಿಯನ್ನು ಹಿಡಿದುಕೊಂಡು ಸದಸ್ಯರು ಹೆಸರಿಸುವುದು ಸರಿಯಲ್ಲ, ಸದಸ್ಯರಿಗೆ ಗೌರವ ನೀಡಬೇಕು ಎಂದು ಸದಸ್ಯ ಜನಾರ್ದನ ಚಂಡ್ತಿಮಾರ್ ತಿಳಿಸಿದರು.
ಟ್ರೀಟ್ಮೆಂಟ್ ಪ್ಲಾಂಟ್ ನಲ್ಲಿರುವ 25 ಮಂದಿ ಎಲ್ಲಿದ್ದಾರೆ, ಅಲ್ಲಿ ಹೆಚ್ಚಿನ ಸಿಬ್ಭಂದಿ ಅಗತ್ಯ ಎಂದು ಜನಾರ್ದನ ಚಂಡ್ತಿಮಾರ್ ಪ್ರಶ್ನಿಸಿದರು. ರಸ್ತೆ ಬದಿ ಕಸ ಹಾಕುವವರನ್ನು ನಿಯಂತ್ರಿಸಲು ಸಿಸಿ ಟಿವಿ ಕ್ಯಾಮರಾ ಅಗತ್ಯ ಎಂದು ಗೋವಿಂದ ಪ್ರಭು, ವಾಸು ಪೂಜಾರಿ ಮತ್ತಿತರರು ಒತ್ತಾಯಿಸಿದರು. ಖಾಸಗಿ ಬ್ಯಾಂಕ್ ಒಂದಕ್ಕೆ ಸ್ಥಳಾವಕಾಶ ಒದಗಿಸಿರುವ ವಿಚಾರ, ಬೀದಿದೀಪ ನಿರ್ವಹಣೆ, ಕಸ ವಿಲೇವಾರಿ ಮತ್ತಿತರ ವಿಚಾರಗಳ ಕುರಿತು ಚರ್ಚೆ ನಡೆದವು. ಬೀದಿ ಬದಿ ವ್ಯಾಪಾರಿಗಳಿಗೆ ಈಗ ನಮೂದಿಸಿರುವ ಜಾಗ ಸರಿ ಇಲ್ಲ ಎಂದು ಆಕ್ಷೇಪ ಬಂದವು. ವಾರ್ಷಿಕ ಟೆಂಡರ್ ಗಳನ್ನು ವಿರೋಧಿಸುವ ವೇಳೆ ಬಿಜೆಪಿ ಮತ್ತು ಎಸ್.ಡಿ.ಪಿ.ಐ. ಸಮಾನ ಮನಸ್ಕರಾದರು.
ಸದಸ್ಯರಾದ ಗೋವಿಂದ ಪ್ರಭು, ಮಹಮ್ಮದ್ ನಂದರಬೆಟ್ಟು, ಲುಕ್ಮಾನ್, ಸಿದ್ದೀಕ್ ಗುಡ್ಡೆಯಂಗಡಿ, ಗಂಗಾಧರ್, ವಾಸು ಪೂಜಾರಿ, ಮೊನೀಶ್ ಆಲಿ , ಝೀನತ್ ಫಿರೋಜ್, ವಿದ್ಯಾವತಿ, ಹರಿಪ್ರಸಾದ್, ಲೋಲಾಕ್ಷ ಶೆಟ್ಟಿ, ಹಸೈನಾರ್ ಮೊದಲಾದವರು ವಿವಿಧ ಚರ್ಚೆಗಳಲ್ಲಿ ಪಾಲ್ಗೊಂಡರು.
Kshetra Samachara
25/02/2021 06:56 pm