ಕಾಪು: ಬೆಳಪು ಗ್ರಾಪಂ ಅಧ್ಯಕ್ಷರಾಗಿ ಬೆಳಪು ಗ್ರಾಮಾಭಿವೃದ್ಧಿ ಸಮಿತಿ ಬೆಂಬಲಿತರಾದ ಶೋಭಾ ಜಿ.ಭಟ್ ಹಾಗೂ ಶರತ್ ಕುಮಾರ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
11 ಸದಸ್ಯ ಬಲದ ಗ್ರಾಪಂನಲ್ಲಿ ಗ್ರಾಮಾಭಿವೃದ್ಧಿ ಬೆಂಬಲಿತ 8, ಬಿಜೆಪಿ ಬೆಂಬಲಿತ 1 ಹಾಗೂ ಎಸ್ಡಿಪಿಐ ಬೆಂಬಲಿತ 2 ಮಂದಿ ಸದಸ್ಯರು ಚುನಾಯಿತರಾಗಿದ್ದರು. ಸಾಮಾನ್ಯ ಮಹಿಳೆ ಮೀಸಲಿನಡಿ ಅಧ್ಯಕ್ಷ ಸ್ಥಾನಕ್ಕೆ 4 ನೇ ಅವಧಿಗೆ ಸದಸ್ಯರಾದ ಶೋಭಾ ಮತ್ತು ನಫೀಝಾ ಬಾನು, ಹಿಂದುಳಿದ ವರ್ಗ ಎ ಮೀಸಲಿನ ಉಪಾಧ್ಯಕ್ಷ ಸ್ಥಾನಕ್ಕೆ ಎರಡನೇ ಅವಧಿಗೆ ಸದಸ್ಯರಾದ ಶರತ್ ಕುಮಾರ್ ಮತ್ತು ಫಹೀಂ ಬೆಳಪು ನಾಮಪತ್ರ ಸಲ್ಲಿಸಿದ್ದರು.
ಅಂತಿಮವಾಗಿ ಚುನಾವಣೆ ಪ್ರಕ್ರಿಯೆಯಲ್ಲಿ ನಫೀಝಾ ಹಾಗೂ ಫಹೀಂ ಕಣದಿಂದ ಹಿಂದೆ ಸರಿದರು. ಕಣದಲ್ಲಿ ಉಳಿದ ಶೋಭಾ ಮತ್ತು ಶರತ್ ಆಯ್ಕೆಯನ್ನು ಚುನಾವಣಾಧಿಕಾರಿ ವೀಣಾ ವಿವೇಕಾನಂದ ಘೋಷಿಸಿದರು. ಆಡಳಿತಾಧಿಕಾರಿ ಸಂತೋಷ್, ಪಿಡಿಒ ರಮೇಶ್ ಹಾಗೂ ಕಾರ್ಯದರ್ಶಿ ಸುಮಿತ್ರ ಚುನಾವಣೆ ಪ್ರಕ್ರಿಯೆಯಲ್ಲಿ ಸಹಕರಿಸಿದರು.
"ಗ್ರಾಮದ ಅಭಿವೃದ್ಧಿ ನಮ್ಮ ಉದ್ದೇಶ, ಈಗಾಗಲೇ ಬೆಳಪು ಗ್ರಾಮದಲ್ಲಿ ಹಲವು ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ. ನಮ್ಮೆಲ್ಲರ ಸತತ ಪ್ರಯತ್ನದಿಂದ ದೇಶದಲ್ಲೇ ಮಾದರಿ ಗ್ರಾಮ ಎಂಬ ಹೆಗ್ಗಳಿಕೆ ನಮಗಿದೆ. ಗ್ರಾಪಂ ಅಭಿವೃದ್ಧಿ ಪಥದಲ್ಲಿ ಸಾಗಲು ನಾವು ಕಾನೂನು ಮೀರಿ ಸಹಕರಿಸಿದ್ದೇವೆ. ಆದ್ದರಿಂದ ನಮಗೇ ತೊಂದರೆಯಾಗಿದೆ. ನೀವು ಕಾನೂನಿನಡಿ ಸಹಕರಿಸಿ.
ಕಾನೂನು ಬದ್ಧವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿ, ನಾವು ನಿಮ್ಮೊಂದಿಗೆ ಸಹಕರಿಸುತ್ತೇವೆ" ಎಂದು ಬೆಳಪು ಗ್ರಾಮದ ಅಭಿವೃದ್ಧಿ ರೂವಾರಿ ಮಾಜಿ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಸಲಹೆ ನೀಡಿದರು.
Kshetra Samachara
16/02/2021 10:22 pm