ಕಾರ್ಕಳ : ರೈತ ವಿರೋಧಿ ೩ ಕಾನೂನು ಜಾರಿ ಮಾಡಿ ಬಿಜೆಪಿಯು ಜನರ ಬದುಕನ್ನು ಕಂಗಾಲು ಮಾಡಿದೆ. ಜನಸಾಮಾನ್ಯರು ಬದುಕುವುದೇ ಕಷ್ಟವಾಗಿದೆ. ತಮ್ಮ ಕಷ್ಟವನ್ನು ಯಾರಲ್ಲೂ ಹೇಳಿಕೊಳ್ಳಲಾಗದೇ ಜನತೆ ಒದ್ದಾಡುತ್ತಿದ್ದಾರೆ. ಬಿಜೆಪಿಯವರ ಸಹಿತ ಯಾರಿಗೂ ಇನ್ನು ಬಿಜೆಪಿ ಬೇಡವಾಗಿದೆ, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಜನರ ಕಷ್ಟಗೊತ್ತಿಲ್ಲ, ಗ್ಯಾಸ್ ಪೆಟ್ರೋಲ್, ಡಿಸೇಲ್, ವಿಪರೀತ ಬೆಲೆ ಏರಿಕೆ, ಕ್ರಷಿ ಹೆಸರಿನಲ್ಲಿ ಅಧಿಕ ಸೆಸ್ ಜಾರಿ, ತೆರಿಗೆಯ ಮೇಲೆ ತೆರಿಗೆ ವಿಧಿಸುವುದು, ಜಿಎಸ್‌ಟಿ ಸಂಕಷ್ಟ, ಪೆಟ್ರೋಲ್ ಮೂಲ ಬೆಲೆಯ ಮೇಲೆ ೨೫೦ ಶೇಕಡಕ್ಕಿಂತಲೂ ಅಧಿಕ ತೆರಿಗೆ ಹಾಕಿ ಜನರನ್ನು ಬದಕಲು ಬಿಡುತ್ತಿಲ್ಲ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.
ಅವರು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಶನಿವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು, ಉದ್ಯೋಗಿಗಳು, ಉದ್ಯೋಗದಾತ ಕಂಪೆನಿಗಳು, ವಾಹನ ಚಾಲಕ ಮಾಲಕರು, ಜನಸಾಮಾನ್ಯರು, ಉದ್ಯಮಗಳು ಅಧಿಕ ತೆರಿಗೆಯ ಹೊರೆಯಿಂದ ನಲುಗಿ ಹೋಗಿದ್ದಾರೆ. ಯಾರೂ ಸರ್ಕಾರವನ್ನು ವಿರೋಧಿಸುವ ದೈರ್ಯ ಮಾಡುತ್ತಿಲ್ಲ. ಅನಿವಾರ್ಯವಾಗಿ ಎಲ್ಲವನ್ನು ಸಹಿಸಿಕೊಂಡು ಕಷ್ಟದ ಜೀವನ ನಡೆಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಸರ್ವಾಧಿಕಾರದ ಜನವಿರೋಧಿ ಸರ್ಕಾರ ಎಂದು ಮಂಜುನಾಥ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.
ದೇಶವನ್ನು ಮಾರಲು ಬಾಕಿ ಇದೆ : ೬೦ ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಬಿಜೆಪಿಯವರು ಕೇಳುತ್ತಾರೆ. ೬೦ ವರ್ಷಗಳಿಂದ ದೇಶ ಮತ್ತು ಜನತೆಗೆ ಕಾಂಗ್ರೆಸ್ ಸ್ಥಾಪಿಸಿದ ರೈಲ್ವೇ, ಎಲ್‌ಐಸಿ, ವಿಮಾನ ನಿಲ್ದಾಣ, ವಿದ್ಯುತ್ ಇಲಾಖೆ, ಬಿಎಸ್‌ಎನ್ ಎಲ್ ಸಹಿತ ಎಲ್ಲವನ್ನು ಬಿಜೆಪಿಯನ್ನು ಪೋಷಿಸುವ ಖಾಸಗಿಯವರಿಗೆ ಮಾರಾಟ ಮಾಡಿದ್ದಾರೆ. ಇನ್ನು ದೇಶವನ್ನು ಮಾರಲು ಮಾತ್ರ ಬಾಕಿ ಇದೆ. ಆದರೂ ಬಿಜೆಪಿ ಜನಪರವಾಗಿದೆ ಎಂದು ಸುಳ್ಳು ಹೇಳಿ ಬಿಂಬಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ೧ ಸುಳ್ಳನ್ನು ೧೦೦ ಸಲ ಹೇಳಿ ಸತ್ಯ ಮಾಡುವ ಕರಗತ ಮಾಡಿಕೊಂಡು ಭ್ರಷ್ಟಾಚಾರದಲ್ಲಿ ನಿಸ್ಸೀಮರಾಗಿದ್ದಾರೆ. ಪೆಟ್ರೋಲ್ ಗೆ ೧೦೦ ಸಮೀಪಿಸುತ್ತಿದ್ದರೂ ಒಬ್ಬರೂ ಚಕಾರ ಎತ್ತದಿರುವುದು ವಿಪರ್ಯಾಸ ಎಂದು ಮಂಜುನಾಥ ಪೂಜಾರಿ ಬೇಸರ ವ್ಯಕ್ತಪಡಿಸಿದರು.
Kshetra Samachara
07/02/2021 10:21 am