ಮುಲ್ಕಿ: ಹತ್ರಾಸ್ ಹೇಯ ಪ್ರಕರಣದ ಕುರಿತು ಉತ್ತರಪ್ರದೇಶದ ಬಿಜೆಪಿ ಸರಕಾರ ಮೌನ ವಹಿಸಿರುವುದು ಖಂಡನೀಯ, ತಪ್ಪಿತಸ್ಥರಿಗೆ ಘೋರ ಶಿಕ್ಷೆ ಯಾಗಬೇಕು ಹಾಗೂ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಮೇಲಿನ ದೌರ್ಜನ್ಯ ವಿರುದ್ಧ ಮುಲ್ಕಿ ಬ್ಲಾಕ್ ಕಾಂಗ್ರೆಸ್ಸಿನ ನೇತೃತ್ವದಲ್ಲಿ ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಇಂಟಕ್ ಸಮಿತಿ, ಯುವ ಇಂಟಕ್ ಸಮಿತಿ, ಎನ್ಎಸ್ ಯು ಐ ಸಮಿತಿ, ಸೇವಾದಳ ಸಮಿತಿ, ವಿವಿಧ ಮುಂಚೂಣಿ ಘಟಕಗಳ ಸಹಯೋಗದೊಂದಿಗೆ ಮುಲ್ಕಿ ರಾ.ಹೆ. ಯಲ್ಲಿರುವ ಬಸ್ ನಿಲ್ದಾಣ ಬಳಿ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ಉತ್ತರಪ್ರದೇಶದಲ್ಲಿ ದಲಿತ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಖಂಡನೀಯವಾಗಿದ್ದು, ಕೇಂದ್ರ ಸರ್ಕಾರ ಸೂಕ್ತ ತನಿಖೆ ನಡೆಸದೆ ಮೌನ ವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಆರೋಪಿಗಳನ್ನು ಜೈಲಿನಲ್ಲಿ ಭೇಟಿ ಮಾಡಲು ಬಿಜೆಪಿ ನಾಯಕರು ಹೋಗುತ್ತಿರುವುದು ನಾಚಿಕೆಗೇಡು.
ಕೊರೊನಾದಿಂದ ಜನ ತತ್ತರಿಸುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾಡ್,ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ ಕಾರ್ನಾಡ್, ಮುಲ್ಕಿ ನಪಂ ಸದಸ್ಯರಾದ ಪುತ್ತುಬಾವ, ವಿಮಲ ಪೂಜಾರಿ, ಬಾಲಚಂದ್ರ ಕಾಮತ್, ಮಂಜುನಾಥ ಕಂಬಾರ, ಮುನ್ನ ಯಾನೆ ಮಹೇಶ, ಯೋಗೀಶ್ ಕೋಟ್ಯಾನ್, ಸಂದೀಪ್ ಕುಮಾರ್ ಹಾಗೂ ಕಾಂಗ್ರೆಸ್, ಇಂಟಕ್ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಉಪಸ್ಥಿತರಿದ್ದರು. ಧನಂಜಯ ಕೋಟ್ಯಾನ್ ಮಟ್ಟು ವಂದಿಸಿದರು.
Kshetra Samachara
07/10/2020 08:01 pm