ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66 ಸುರತ್ಕಲ್ ಎನ್‌ಐಟಿಕೆ ಅಕ್ರಮ ಟೋಲ್ ವಿರುದ್ಧ ಸೆ. 13ರಂದು ನಡೆಯುವ ಸಾಮೂಹಿಕ ಪ್ರತಿಭಟನಾ ಧರಣಿಯನ್ನು ಒಗ್ಗಟ್ಟಾಗಿ ಯಶಸ್ವಿಗೊಳಿಸಬೇಕು ಎಂದು ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಹೇಳಿದರು.
ಅವರು ಮುಲ್ಕಿ ಪುನರೂರು ಟೂರಿಸ್ಟ್ ಹೋಮ್ ಸಭಾಂಗಣದಲ್ಲಿ ನಡೆದ ಟೋಲ್ ವಿರೋಧಿ ಹೋರಾಟಗಾರರ ಸಭೆಯಲ್ಲಿ ಮಾತನಾಡಿದರು. ಟೋಲ್ ಮಾಫಿಯಾದಲ್ಲಿ ಸಂಸದರು, ಶಾಸಕರ ಸಹಿತ ಬಿಜೆಪಿ ನಾಯಕರು ಭಾಗಿಯಾಗಿದ್ದು 40% ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಟೋಲ್ ತೆರವಿಗೆ ಮೌನ ವಹಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಸೆ.13ರಂದು ಟೋಲ್ ಬಳಿ ಪಕ್ಷಾತೀತವಾಗಿ "ಸುರತ್ಕಲ್ ಅಕ್ರಮ ಟೋಲ್ ತೆರವಿಗೆ ದಿನಾಂಕ ಘೋಷಿಸಿ"ಎಂಬ ಬೇಡಿಕೆ ಮುಂದಿಟ್ಟು ಸಾಮೂಹಿಕ ಪ್ರತಿಭಟನೆ ನಡೆಯಲಿದ್ದು ಸಂಬಂಧಪಟ್ಟವರು ಟೋಲ್ ರದ್ದುಗೊಳಿಸುವ ಬಗ್ಗೆ ಸ್ಪಷ್ಟನೆ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವ ಮೂಲಕ ಹೋರಾಟಗಾರರೇ ತೀರ್ಮಾನ ಕೈಗೊಂಡು ಟೋಲ್ ಮುಚ್ಚಿಸಿ
ಜೈಲಿಗೂ ಹೋಗಲು ಸಿದ್ಧ ಎಂದು ಎಚ್ಚರಿಕೆ ನೀಡಿದರು
ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಮಾತನಾಡಿ ಅನಧಿಕೃತ ಟೋಲ್ ತೆರವು ಬಗ್ಗೆ ಸಂಬಂಧಪಟ್ಟ ಆಡಳಿತ ಮೀನಮೇಷ ಎಣಿಸುತ್ತಿದ್ದು ಯಾವುದೇ ಮೂಲಭೂತ ಸೌಕರ್ಯವಿಲ್ಲದ ಅಕ್ರಮ ಟೋಲ್ ಕೂಡಲೇ ಮುಚ್ಚಬೇಕು, ಟೋಲ್ ವಿರೋಧಿ ಹೋರಾಟಗಾರರ ಧ್ವನಿ ಅಡಗಿಸುವ ಯತ್ನ ಮಾಡಲಾಗುತ್ತಿದೆ. ಇದಕ್ಕೆಲ್ಲ ನಾವು ಬಗ್ಗುವುದಿಲ್ಲ ನಮ್ಮ ಹೋರಾಟ ನಿರಂತರ ಎಂದರು.
ಸಮಿತಿ ಪದಾಧಿಕಾರಿಗಳಾದ ವಸಂತ ಬೆರ್ನಾಡ್, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ನಪಂ ಸದಸ್ಯರಾದ ಯೋಗೀಶ್ ಕೋಟ್ಯಾನ್, ಪುತ್ತುಬಾವ ದೆಪ್ಪುಣಿಗುತ್ತು ಕಿಶೋರ್ ಶೆಟ್ಟಿ, ಶಾಹುಲ್ ಹಮೀದ್ ಹಳೆಯಂಗಡಿ, ಲಾರಿ ಮಾಲಕರ ಸಂಘದ ಉಪಾಧ್ಯಕ್ಷ ಮೂಸಬ್ಬ ನೂರಾನಿಯ, ಡಿವೈಎಫ್ಐ ಮುಖಂಡ ಶ್ರೀನಾಥ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
08/09/2022 09:14 pm