ಮಂಗಳೂರು: ನಗರದ ಹೊರವಲಯದ ಬಡಗ ಎಕ್ಕಾರಿನಲ್ಲಿ ನಿರ್ಮಿತವಾಗಬೇಕಿದ್ದ ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್ ಎಎಫ್-ರ್ಯಾಪಿಡ್ ಆಕ್ಷನ್ ಫೋರ್ಸ್) ಘಟಕವನ್ನು ಮಂಗಳೂರು ಜನರ ಅರಿವಿಗೆ ಬಾರದಂತೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಗೆ ಸ್ಥಳಾಂತರಿಸಲಾಗಿದೆ'' ಎಂದು ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‌ಐ)ನ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಗಲಭೆಗಳನ್ನು ನಿಯಂತ್ರಿಸುವಲ್ಲಿ ಈ ಪಡೆ ಮಹತ್ದವ ಪಾತ್ರ ವಹಿಸುತ್ತದೆ. ಈಗ ಇದೇ ರಕ್ಷಣಾ ಪಡೆಯನ್ನು ಏಕಾಏಕಿ ಶಿವಮೊಗ್ಗಕ್ಕೆ ಸ್ಥಳಾಂತರಿಸಲಾಗಿದೆ. ಇದು ಜಿಲ್ಲೆಗೆ ಮಾಡಿದ ಅನ್ಯಾಯ. ಕ್ಷಿಪ್ರ ಕಾರ್ಯಾಚರಣೆ ಪಡೆ ಘಟಕ ಶಿವಮೊಗ್ಗಕ್ಕೆ ಸ್ಥಳಾಂತರವಾಗಿದ್ದು ಸಂಸದ ನಳಿನ್ ಕುಮಾರ್ ಕಟೀಲು ಅವರ ವೈಫಲ್ಯವೇ ಕಾರಣ'' ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ದಕ್ಷಿಣ ಕನ್ನಡದಂತಹ ಕೋಮು ಸೂಕ್ಷ್ಮ ಜಿಲ್ಲೆಗೆ ಕ್ಷಿಪ್ರ ಕಾರ್ಯಾಚರಣೆ ಪಡೆಯ ಘಟಕ ಅತ್ಯಗತ್ಯವಾಗಿದೆ. ಕೋಮು ಹಿಂಸಾಚಾರ ಸಂಭವಿಸುವ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಮಂಗಳೂರು ಒಂದು ಕೇಂದ್ರ ಭಾಗವಾಗಿದೆ. ಕ್ಷಿಪ್ರ ಕಾರ್ಯಾಚರಣೆ ಪಡೆಯು ಮಂಗಳೂರಿನಲ್ಲಿ ಸ್ಥಾಪನೆಯಾದರೆ, ಅದು ವಿಮಾನ ನಿಲ್ದಾಣ ಸಹಿತ ಸಾರಿಗೆ ಸಂಪರ್ಕದ ಸೌಲಭ್ಯದಿಂದಾಗಿ ದೂರದ ಜಿಲ್ಲೆಗಳಿಗೂ ತಲುಪಲು ಅನುಕೂಲಕರವಾಗಿತ್ತು. ದ.ಕ. ಜಿಲ್ಲೆಯಲ್ಲಂತೂ ಈ ಘಟಕದ ಕಾರ್ಯಾಚರಣೆಯು ಹಲವು ಹಿಂಸಾಚಾರಗಳಿಗೆ ಕಡಿವಾಣ ಹಾಕುವ ಸಹಕಾರಿಯಾಗಿತ್ತು. ಆ ಹಿನ್ನಲೆಯಲ್ಲಿಯೇ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಮಂಗಳೂರು ತಾಲೂಕಿನ ಬಡಗ ಎಕ್ಕಾರು ಗ್ರಾಮದಲ್ಲಿ ಐವತ್ತು ಎಕರೆ ಸ್ಥಳವನ್ನು ಗುರುತಿಸಿ ಕ್ಷಿಪ್ರ ಕಾರ್ಯಾಚರಣೆ ಪಡೆ ಘಟಕಕ್ಕಾಗಿ ಕಾದಿರಿಸಲಾಗಿತ್ತು'' ಎಂದು ಮುನೀರ್ ಹೇಳಿದ್ದಾರೆ.
Kshetra Samachara
18/01/2021 01:07 pm