ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪನಡು ಕಂಚಿನಡ್ಕ ಅವೈಜ್ಞಾನಿಕ ಘನತ್ಯಾಜ್ಯ ಘಟಕದ ಅವ್ಯವಸ್ಥೆ ಬಗ್ಗೆ ಸ್ಥಳೀಯರ ಅಹವಾಲಿನ ಮೇರೆಗೆ ಪರಿಶೀಲನೆ ನಡೆಸಿದ ಶಾಸಕ ಯು.ಟಿ.ಖಾದರ್ ಘಟಕಕ್ಕೆ ಬೀಗ ಜಡಿದ ಘಟನೆ ನಡೆದಿದೆ.
ಬಂಟ್ಟಾಳ ಪುರಸಭೆಯ ಘನತ್ಯಾಜ್ಯ ಘಟಕಕ್ಕೆ ಬಂಟ್ವಾಳ ಹೊರ ವಲಯದ ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿ 2007ರಲ್ಲಿ ಸ್ಥಳ ನಿಗದಿಪಡಿಸಲಾಗಿತ್ತು. ಆದರೆ, ಘಟಕ ನಿರ್ಮಾಣಕ್ಕೆ ಸ್ಥಳೀಯರ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೆ, ಹೊಸ ಸರಕಾರ ಬಂದ ನಂತರ ಅದೇ ಸ್ಥಳದಲ್ಲಿ ಘನತ್ಯಾಜ್ಯ ತೆರೆಯುವ ಬಗ್ಗೆ ಸದನದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಒತ್ತಾಯಿಸಿದಾಗ ಸ್ಥಳೀಯ ಶಾಸಕ ಯು.ಟಿ.ಖಾದರ್ ಭಾರೀ ವಿರೋಧ ವ್ಯಕ್ತಪಡಿಸಿದ್ದರು.
ನಂತರ ಸ್ಪೀಕರ್ ಹಾಗೂ ಸಚಿವರು ಮಧ್ಯೆ ಪ್ರವೇಶಿಸಿ ಜಿಲ್ಲಾಡಳಿತ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಅಂದಿನ ಜಿಲ್ಲಾಧಿಕಾರಿ ಆಗಿದ್ದ ಸಿಂಧೂ ರೂಪೇಶ್ ರವರು ಶಾಸಕರೂ ಸೇರಿದಂತೆ ಸಹಾಯಕ ಕಮಿಷನರ್ , ಮಂಗಳೂರು ತಹಶೀಲ್ದಾರ್, ಬಂಟ್ಟಾಳ ತಹಶೀಲ್ದಾರ್, ಬಂಟ್ಟಾಳ ಪುರಸಭೆ ಮುಖ್ಯಾಧಿಕಾರಿ, ಸಜೀಪನಡು ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಸಭೆ ನಡೆಸಿ ಒಣಕಸ ಮಾತ್ರ ಹಾಕಲು ನಿರ್ಧರಿಸಿ, ಅದರಿಂದ ಬರುವ ಆದಾಯ ಸ್ಥಳೀಯ ಪಂಚಾಯತ್ ಗೆ ನೀಡುವ ಒಪ್ಪಂದ ನಡೆಸಿ ಬಂಟ್ವಾಳ ಪುರಸಭೆಗೆ ಸೂಚನೆ ನೀಡಲಾಗಿತ್ತು.
ನಂತರ ಕೆಲ ಕಾಲ ಕೇವಲ ಒಣಕಸ ಮಾತ್ರ ತಂದು ವಿಲೇವಾರಿ ಮಾಡುವ ಕೆಲಸ ಚಾಲ್ತಿಯಲ್ಲಿತ್ತು. ಆದರೆ, ಕ್ರಮೇಣ ಹಸಿ ಕಸ ಕೂಡ ಬರಲಾರಂಭಿಸಿತು. ಸತ್ತ ಪ್ರಾಣಿ ಸಮೇತ ತಂದು ಸುರಿದು ಪಚ್ಟನಾಡಿ ತರಹ ಆಗಿ ಯಾರೂ ಕೇಳದ ಪರಿಸ್ಥಿತಿಗೆ ಬಂದು ಬಿಟ್ಟಿತು. ಈ ಬಗ್ಗೆ ಸ್ಥಳೀಯರು ಮತ್ತೆ ಶಾಸಕ ಯು.ಟಿ.ಖಾದರ್ ಬಳಿ ಅಹವಾಲು ತಿಳಿಸಿದಾಗ ಶಾಸಕರು ಇಂದು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಘನತ್ಯಾಜ್ಯ ಘಟಕಕ್ಕೆ ಬೀಗ ಜಡಿದರು.
Kshetra Samachara
29/06/2022 11:02 am