ಬಂಟ್ವಾಳ: ಪದೇ ಪದೇ ರಾಜಧರ್ಮವನ್ನು ಉಲ್ಲೇಖಿಸುವ ಬಿಜೆಪಿ ಆಡಳಿತ ಇಂದು ಕ್ಷೇತ್ರದಲ್ಲಿ ತಾರತಮ್ಯ ಎಸಗುತ್ತಿದ್ದು, ಇದು ಮುಂದುವರಿದರೆ ಬಸ್ಸಿನೆದುರು ಅಡ್ಡ ಮಲಗುತ್ತೇನೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ಸೋಮವಾರ ದಿಢೀರನೆ ತನ್ನ ಬೆಂಬಲಿಗರೊಂದಿಗೆ ಬಂಟ್ವಾಳ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ ರೈ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ತಹಶೀಲ್ದಾರ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ, ಕೆ.ಎಸ್.ಆರ್.ಟಿ.ಸಿ.ಐಸಿಯು ಬಸ್, ಕಾಂಗ್ರೆಸ್ ಮತ್ತಿತರ ಪಕ್ಷ ಬೆಂಬಲಿತರ ಆಡಳಿತವಿರುವ ಪಂಚಾಯಿತಿ ಊರಿಗೆ ಬರುವುದಿಲ್ಲ, ಬಿಜೆಪಿ ಬೆಂಬಲಿತರ ಆಡಳಿತವಿದ್ದ ಪಂಚಾಯಿತಿಗೆ ಮಾತ್ರ ಬರುತ್ತದೆ. ಕಾರ್ಮಿಕರಿಗೆ ಕಿಟ್ ಅರ್ಹರ ಕೈಸೇರುತ್ತಿಲ್ಲ, ಯಾರ್ಯಾರೋ ಇದನ್ನು ವಿತರಿಸುತ್ತಿದ್ದಾರೆ. ಆಶಾ ಕಾರ್ಯಕರ್ತೆ ಮೇಲೆ ಬೆದರಿಕೆ ಕುರಿತು ಆಡಳಿತ ಗಂಭೀರವಾಗಿ ಪರಿಗಣಿಸಿಲ್ಲ. 94 ಸಿ ಸವಲತ್ತು ಅರ್ಹರಿಗೆ ವಿತರಣೆ ಆಗಬೇಕು ಎಂಬ ಹಲವು ವಿಚಾರಗಳ ಕುರಿತು ಆಗ್ರಹ ಮಂಡಿಸಿದ್ದಾಗಿ ಅವರು ಹೇಳಿದರು.
ಅಧಿಕಾರಿಗಳು ತಪ್ಪು ಮಾಡಿದರೆ ಅವರ ವಿರುದ್ಧ ಹೋರಾಟವನ್ನು ನಾವು ಮಾಡುತ್ತೇವೆ. ನಿಜವಾದ ಕಾರ್ಮಿಕರಿಗೆ ಕಿಟ್ ಸಿಕ್ಕಿಲ್ಲ. ಬಿಜೆಪಿ ಪಂಚಾಯಿತಿ ಇದ್ದಲ್ಲಿ ಪಂಚಾಯಿತಿಯಲ್ಲಿ ಕೊಡ್ತಾರೆ, ಇಲ್ಲದಲ್ಲಿ ಕಾರ್ಯಕರ್ತರ ಮೂಲಕ ಕೊಡ್ತಾರೆ. ಪಂಚಾಯಿತಿ ಆಡಳಿತ ವ್ಯವಸ್ಥೆ ಮೂಲಕ ಸವಲತ್ತುಗಳನ್ನು ಕೊಡುವುದು ಸರಿಯಾದ ಮಾರ್ಗವಲ್ಲವೇ ಎಂದು ಪ್ರಶ್ನಿಸಿದರು. ನಾವು ಈ ಕುರಿತು ಬೇಡಿಕೆ ಕೊಟ್ಟರೂ ಬೆಲೆ ಸಿಗದಿದ್ದ ಕಾರಣ ಪ್ರತಿಭಟನೆ ಮಾಡಿದ್ದೇವೆ ಎಂದ ಅವರು, ರಾಜಧರ್ಮ ಎಂದರೆ ರಾಜಕೀಯ ಮಾಡುವುದಲ್ಲ, ಎಲ್ಲ ಜಾತಿ, ಧರ್ಮ, ಭಾಷೆಯವರನ್ನು ಒಂದೇ ರೀತಿ ಕಾಣುವುದು ರಾಜಧರ್ಮ, 94 ಸಿ ಕೊಡಬೇಕಾದರೆ ಶಕ್ತಿಕೇಂದ್ರಕ್ಕೆ ದೂರವಾಣಿ ಕರೆ ಮಾಡಬೇಕು ಇದೆಂಥ ವ್ಯವಸ್ಥೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Kshetra Samachara
31/08/2021 01:24 pm