ಕಾರ್ಕಳ : ಬಂಗ್ಲೆಗುಡ್ಡೆ ಪರನೀರು ಗುಂಡ್ಯ ಅಭಿವೃದ್ಧಿ ಕಾಮಗಾರಿಗೆ ಸಂಸದರ ನಿಧಿಯಿಂದ ಮಂಜೂರಾದ ಮೂವತ್ತು ಲಕ್ಷ ರೂ. ಅನುದಾನ ವಾಪಸ್ ಹೋಗಿದ್ದು,ಇದಕ್ಕೆ ಮುಖ್ಯಾಧಿಕಾರಿಯೇ ಕಾರಣ. ಅವರ ನಿರ್ಲಕ್ಷ್ಯ ದಿಂದಲೇ ಅನುದಾನ ಹಿಂದಕ್ಕೆ ಹೋಗಿದೆ. ಈ ಬಗ್ಗೆ ಮುಖ್ಯಾಧಿಕಾರಿ ಸ್ಪಷ್ಟ ಮಾಹಿತಿ ನೀಡುವಂತೆ ಪುರಸಭೆ ಸದಸ್ಯೆ ಪ್ರತಿಮಾ ಪಟ್ಟು ಹಿಡಿದು ಸದನದ ಬಾವಿಗೆ ಇಳಿದು ಪ್ರತಿಭಟಿಸಿದ್ದಾರೆ.
ಅವರು ಬುಧವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಕಮಿಷನ್ ಸಿಗುವುದಿಲ್ಲ ಎಂಬ ಕಾರಣಕ್ಕೆ ಅಧಿಕಾರಿಗಳು ಈ ರೀತಿ ಕೆಲಸ ಮಾಡಿದ್ದಾರೆ. ಇದೀಗ ಹಿಂದಕ್ಕೆ ಹೋದ ಅನುದಾನ ಮತ್ತೆ ಕೊಡಿಸಿ. ಇಲ್ಲವಾದಲ್ಲಿ, ಉಗ್ರ ರೀತಿಯಲ್ಲಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.
ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಮಾತನಾಡಿ, ಈಗಾಗಲೇ ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಜೊತೆ ಪತ್ರ ವ್ಯವಹಾರ ನಡೆಸಿದ್ದೇವೆ. ನಾವೆಲ್ಲ ಒಟ್ಟಾಗಿ ಜಿಲ್ಲಾಧಿಕಾರಿಗಳಿಗೆ ಅನುದಾನ ವಾಪಸ್ ಕೊಡಿಸುವಂತೆ ನಿರ್ಣಯ ಮಾಡುವುದಾಗಿ ತಿಳಿಸಿದರು.
ಶುಭದ್ ರಾವ್ ಮಾತನಾಡಿ, ಮುಖ್ಯಾಧಿಕಾರಿಗಳ ತಪ್ಪು ಪತ್ರ ವ್ಯವಹಾರದಿಂದ ಬಂದ ಮೂವತ್ತು ಲಕ್ಷ ಅನುದಾನ ಹಿಂದಕ್ಕೆ ಹೋಗಿದೆ. ಇದೀಗ ಆ ಭಾಗದಲ್ಲಿ ನೀರಿನ ಅಗತ್ಯ ಇದ್ದು ಅವರಿಗೆ ಅನುದಾನ ಮತ್ತೆ ಹಿಂದಕ್ಕೆ ತರಿಸುವುದಾಗಿ ಸಭೆಯಲ್ಲಿ ಮಾತು ನೀಡಿದ್ದೇವೆ. ಆ ನಿಟ್ಟಿನಲ್ಲಿ ಕೂಡಲೇ ಅನುದಾನ ನೀಡುವಂತೆ ಪತ್ರ ಬರೆಯಿರಿ ಎಂದ ಲೇವಡಿ ಮಾಡಿದರು.
ಸಮರ್ಪಕವಾಗಿ ಕಸ ವಿಲೇವಾರಿಯಾಗುತ್ತಿಲ್ಲ. ಕಸದಿಂದಾಗಿ ಗಂಡ- ಹೆಂಡತಿ ನಡುವೆ ಜಗಳವಾಗುತ್ತಿದೆ. ವಾರಕ್ಕೆ ಒಂದು ಬಾರಿಯಾದರೂ ಕಸ ವಿಲೇವಾರಿ ವಾಹನ ಬರುತ್ತಿಲ್ಲ. ದಯವಿಟ್ಟು ಕಸ ವಿಲೇವಾರಿಯನ್ನು ಸರಿಯಾಗಿ ಮಾಡುವಂತೆ ಮನವಿ ಶುಭದ ರಾವ್ ಮನವಿ ಮಾಡಿದರು. ಸದಸ್ಯ ಪ್ರಶಾಂತ್ ಕೋಟ್ಯಾನ್ ಮಾತನಾಡಿ, ಕಸ ವಿಲೇವಾರಿ ವೇಳೆ ವಾಹನಕ್ಕೆ ಮೈಕ್ ಅಳವಡಿಸಿ ವಾಹನಗಳ ಸಮಯ ನಿಗದಿಪಡಿಸಿ ಎಂದರು.
ಆಶ್ಪಕ್ ಅಹಮ್ಮದ್ ಮಾತನಾಡಿ, ಸಾಲ್ಮರ ಮಹಾಮ್ಮಾಯ ಮೆಡಿಕಲ್ ನಿಂದ ತಾಲೂಕು ಕಚೇರಿವರೆಗೆ ಡಾಮರೀಕರಣ ನಡೆದಿದ್ದು, ಇದೀಗ ರಸ್ತೆ ಕಾಮಗಾರಿ ಕಳಪೆ, ಅವೈಜ್ಞಾನಿಕತೆಯಿಂದ ಕೂಡಿದೆ. ಅಷ್ಟೇ ಅಲ್ಲದೆ, 13 ಕೋಟಿ ರೂ.ನ ಒಳಚರಂಡಿ ಯೋಜನೆ ಸಂಪೂರ್ಣ ವಿಫಲವಾಗಿದ್ದು, ಆ ಹಣ ಯಾರ ಕಿಸೆ ಸೇರುತ್ತಿದೆ?ಎಂಬುದು ತಿಳಿಯುತ್ತಿಲ್ಲ. ಅದ್ದರಿಂದ ತಾವು ದಯವಿಟ್ಟು ಇದನ್ನು ಗಮನಿಸುವಂತೆ ವಿನಂತಿಸಿದರು.
ಸೋಮನಾಥ ನಾಯ್ಕ್ ಮಾತನಾಡಿ, ಪುರಸಭೆಯಲ್ಲಿ ಮಾಹಿತಿ ಕೇಳಿ ತಿಂಗಳಾದರೂ ಮಾಹಿತಿ ನೀಡದೆ ಸತಾಯಿಸುತ್ತಿದ್ದಾರೆ. ಈಗಾಗಲೇ ಲೋಕಾಯುಕ್ತದಲ್ಲಿ ಅಧಿಕಾರಿಗಳ ವಿರುದ್ಧ ದೂರು ನೀಡಲಾಗಿದ್ದು, ಅವರನ್ನು ರಿಲೀವ್ ಮಾಡದಂತೆ ಒತ್ತಾಯಿಸಿದರು.
ಯಾವಾಗ ಪ್ರಾಧಿಕಾರ ರಚನೆಯಾಯಿತೋ ಅಂದಿನಿಂದ ಜನರ ಗ್ರಹಚಾರ ಕೆಟ್ಟು ಹೋಗಿದೆ. ಪ್ರಾಧಿಕಾರದ ಕೆಳ ಅಧಿಕಾರಿಯಿಂದ ಮೇಲಾಧಿಕಾರಿವರೆಗೆ ಹಣದ ಸುರಿಮಳೆಯಾಗುತ್ತಿದೆ ಎಂದು ಅಶ್ಪಕ್ ಆಹಮ್ಮದ್ ಗಂಭೀರ ಆರೋಪ ಮಾಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಪಲ್ಲವಿ, ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಉಪಸ್ಥಿತರಿದ್ದರು. ಆಡಳಿತ ಪಕ್ಷ, ಪ್ರತಿಪಕ್ಷದ ಸದಸ್ಯರು, ಪಕ್ಷೇತರ ಸದಸ್ಯ ಲಕ್ಷ್ಮಿ ನಾರಾಯಣ ಮಲ್ಯ ಭಾಗವಹಿಸಿದರು.
Kshetra Samachara
28/01/2021 01:48 pm