ಮಂಗಳೂರು: ಪ್ರಧಾನಿ ಮೋದಿಯವರು ಮಂಗಳೂರು ಆಗಮನ ಹಿನ್ನೆಲೆಯಲ್ಲಿ ತುಳುಭಾಷೆಗೆ ರಾಜ್ಯದ ಅಧಿಕೃತ ಸ್ಥಾನಮಾನ ಹಾಗೂ ಸಂವಿಧಾನದ 8ನೇ ಪರಿಚ್ಛೇದ ಸೇರ್ಪಡೆಯ ಹಕ್ಕೊತ್ತಾಯ ಮಂಡನೆಗೆ ವಿವಿಧ ತುಳು ಸಂಘಟನೆಗಳ ಒಕ್ಕೂಟವು ಮೂರು ದಿನಗಳ ಟ್ವೀಟ್ ಅಭಿಯಾನ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 30, 31 ಹಾಗೂ ಸೆಪ್ಟೆಂಬರ್ 1ರಂದು ಮೂರು ದಿನಗಳ ಟ್ವೀಟ್ ಅಭಿಯಾನ ನಡೆಯಲಿದೆ.
ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷಾ ಸ್ಥಾನಮಾನ ಪಡೆಯಲು ಹಾಗೂ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸ್ಥಾನ ಪಡೆಯುವ ಎಲ್ಲಾ ಅರ್ಹತೆಗಳಿದ್ದರೂ ಈವರೆಗೆ ಯಾವುದೇ ಬೆಳವಣಿಗೆ ಆಗಿಲ್ಲ. ಸಾಕಷ್ಟು ವರ್ಷಗಳಿಂದ ತುಳುಭಾಷೆಯ ಮಾನ್ಯತೆಯ ಕೂಗು ಕೇಳುತ್ತಿದ್ದರೂ ಜನಪ್ರತಿನಿಧಿಗಳು ಮತ್ತು ರಾಜ್ಯ ಸರಕಾರ ಈ ಸ್ಥಾನಮಾನ ಮಾಡುವಲ್ಲಿ ಅನವಶ್ಯಕ ವಿಳಂಬ ಮಾಡುತ್ತಿದೆ. ದೇಶದ ಅತೀ ಸಣ್ಣ ರಾಜ್ಯ ಸಿಕ್ಕಿಂನಲ್ಲಿ ಅಧಿಕೃತ ಸ್ಥಾನ ಪಡೆದ 14 ಭಾಷೆಗಳಿವೆ. ಆದರೆ ಕರ್ನಾಟಕದಲ್ಲಿ ಕನ್ನಡ ಹೊರತುಪಡಿಸಿ ಯಾವುದೇ ಭಾಷೆಗೆ ಅಧಿಕೃತ ಸ್ಥಾನಮಾನ ಪಡೆದಿಲ್ಲ. ತುಳುಭಾಷೆಗೆ ಅಧಿಕೃತ ರಾಜ್ಯ ಭಾಷೆಯಾಗುವ ಎಲ್ಲಾ ಅರ್ಹತೆಗಳಿದ್ದರೂ ತಾಂತ್ರಿಕ ದೋಷ ಎಂದು ಹೇಳಿಕೊಂಡು ವಿಳಂಬ ನೀತಿ ಅನುಸರಿಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2ರಂದು ಪ್ರಧಾನಿ ನರೇಂದ್ರ ಮೋದಿಯವರು ಮಂಗಳೂರು ಭೇಟಿಯ ಪೂರ್ವಭಾವಿಯಾಗಿ ಮೂರು ದಿನಗಳ ಕಾಲ ವಿವಿಧ ತುಳು ಸಂಘಟನೆಗಳು ಜತೆಗೂಡಿ ಟ್ವೀಟ್ ಅಭಿಯಾನ ಕೈಗೊಂಡಿದೆ. ಆದ್ದರಿಂದ ತುಳುವರು ಎಲ್ಲರೂ ಟ್ವೀಟ್ ಮಾಡಿ ತುಳು ಟ್ವೀಟ್ ಅಭಿಯಾನ ಟ್ರೆಂಡಿಂಗ್ ನಲ್ಲಿ ಇರುವಂತೆ ತುಳು ಸಂಘಟನೆಗಳು ಮನವಿ ಮಾಡಿದೆ.
Kshetra Samachara
29/08/2022 05:07 pm