ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಬ್ರಿ: ಸೋರುತಿಹುದು ಮಿನಿ ವಿಧಾನ ಸೌಧ!; "ಕಳಪೆ ಕಾಮಗಾರಿ ಎಂಬುದು ಸ್ಪಷ್ಟ" ಕಾಂಗ್ರೆಸ್

ಹೆಬ್ರಿ: ಇದು ರಾಜ್ಯ ಸರಕಾರದ ಕಳಪೆ ಕಾಮಗಾರಿಗೆ ತಾಜಾ ಉದಾಹರಣೆ. ನೂತನ ತಾಲೂಕು ಹೆಬ್ರಿಯಲ್ಲಿ ತಿಂಗಳ ಹಿಂದೆ ಉದ್ಘಾಟನೆಗೊಂಡ ಆಡಳಿತ ಸೌಧ ಇದು. ಅದೂ ಕೂಡ ಬರೋಬ್ಬರಿ 10 ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಂಡಿತ್ತು.ಇದೀಗ ಒಂದೇ ಮಳೆಗಾಲಕ್ಕೆ ಸೋರಲಾರಂಭಿಸಿದೆ!

ಜೂ.1ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದರು. ಗೋಡೆ ಈಗ ಬಿರುಕು ಬಿಟ್ಟಿದ್ದು, ಮಳೆನೀರು ಒಳಬರತೊಡಗಿದೆ. ಸೌಧದ ಮೇಲ್ಚಾವಣಿಯೂ ಕಳಪೆ ಗುಣಮಟ್ಟದ್ದಾಗಿದೆ. ಮೇಲ್ಚಾವಣಿ ಮೂಲಕ ಮಳೆನೀರು ಗೋಡೆಯ ಕಾರ್ನರ್ ಮೂಲಕ ಬರುತ್ತಿದೆ. ಗುತ್ತಿಗೆದಾರರು ಮತ್ತು ಬಿಜೆಪಿ ಮುಖಂಡರ ಒಳ ಒಪ್ಪಂದ ಹಾಗೂ ಸಂಬಂಧಪಟ್ಟ ಇಲಾಖೆಯ ಬೇಜವಾಬ್ದಾರಿತನ, ಕಟ್ಟಡದ ಕಳಪೆ ಕಾಮಗಾರಿಗೆ ಕಾರಣ ಎಂದು ಜನರಾಡಿಕೊಳ್ಳುತ್ತಿದ್ದಾರೆ.

ಈಗಾಗಲೇ ಕಾಂಗ್ರೆಸ್ ಮುಖಂಡ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ, ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ, ಈ ಬಗ್ಗೆ ಸರಕಾರ ತನಿಖಾ ಸಮಿತಿ ನೇಮಿಸಬೇಕು. ಕಳಪೆ ಕಾಮಗಾರಿ ಬಗ್ಗೆ ತನಿಖೆ ನಡೆಸಬೇಕು, ಕಟ್ಟಡದ ಮೌಲ್ಯಮಾಪನ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ಪ್ರತಿಕ್ರಿಯೆ ನೀಡಿ, 10 ಕೋಟಿ ಅನುದಾನ ಎಲ್ಲಿಗೆ ಹೋಯಿತು ಎಂದೇ ಗೊತ್ತಾಗುತ್ತಿಲ್ಲ.ಇದನ್ನು ನೋಡುವಾಗ ದುಃಖ ಆಗುತ್ತದೆ. ಇದೊಂದು ಕಳಪೆ ಕಾಮಗಾರಿ ಎಂಬುದು ಸ್ಪಷ್ಟ. ತಕ್ಷಣ ಜಿಲ್ಲಾಡಳಿತ ಇದರ ಬಗ್ಗೆ ಸೂಕ್ತ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಒಟ್ಟಾರೆ ರಾಜ್ಯ ಸರಕಾರದ ವಿರುದ್ಧ 40% ಕಮಿಷನ್ ಆರೋಪ ಬಂದಿರುವಾಗಲೇ ಈ ಬೆಳವಣಿಗೆ ನಡೆದಿರುವುದು ಜನರ ಅನುಮಾನವನ್ನು ಇಮ್ಮಡಿಗೊಳಿಸಿದೆ.‌

ವಿಶೇಷ ವರದಿ: ರಹೀಂ ಉಜಿರೆ

Edited By : Somashekar
Kshetra Samachara

Kshetra Samachara

05/07/2022 06:31 pm

Cinque Terre

25.75 K

Cinque Terre

5