ಮಂಗಳೂರು: ಹಿಂದೆ ಎಸ್ಎಸ್ಎಲ್ ಸಿ, ಪಿಯುಸಿ ಫಲಿತಾಂಶ ಬರುವ ವೇಳೆ ಅವಿಭಜಿತ ದ.ಕ.ಜಿಲ್ಲೆ ಮೇಲುಗೈ ಎಂದು ಪತ್ರಿಕೆಯಲ್ಲಿ ಬರುತ್ತಿತ್ತು. ಆದರೆ ಇದೀಗ ವಿದ್ಯಾರ್ಥಿಗಳ ಫಲಿತಾಂಶವು 20ನೇ ಸ್ಥಾನಕ್ಕೆ ಕುಸಿದಿದೆ. ಇದಕ್ಕೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತಿರುವುದೇ ಕಾರಣ. ಆದ್ದರಿಂದ ಎಲ್ಲರೂ ಎಚ್ಚರವಹಿಸಿ ಮುಂದಕ್ಕೆ ಹೀಗಾಗದಂತೆ ನೋಡಿಕೊಳ್ಳಬೇಕಿದೆ ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.
ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ವತಿಯಿಂದ ನಗರದ ಬೋಳಾರದ ಶಾದಿಮಹಲ್ ನಲ್ಲಿ ನಡೆದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಅವರು, ದ.ಕ.ಜಿಲ್ಲೆಯಲ್ಲಿ ನಕಲಿ ದೇಶ ಭಕ್ತರು ದೇಶಭಕ್ತಿಯ ಬಗ್ಗೆ ಮಾತನಾಡುತ್ತಾರೆ. ಕೇವಲ ಒಂದೇ ಧರ್ಮದವರು ಈ ದೇಶಕ್ಕೆ ಕೊಡುಗೆ ಕೊಟ್ಟಿಲ್ಲ. ಸಾವಿತ್ರಿ ಬಾಯಿ ಪುಲೇ, ಫಾತಿಮಾ ಶೇಖ್ ಅವರು ದೇಶದ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಲೆಂದು 18ನೇ ಶತಮಾನದಲ್ಲಿಯೇ ಹೋರಾಟ ಮಾಡಿದ್ದಾರೆ. ಇದೀಗ ಈ ದೇಶದಲ್ಲಿ, ಮಹಿಳೆಯರು ಶಿಕ್ಷಣದಲ್ಲಿ ಮುಂದೆ ಬಂದಿದ್ರೆ ಅದಕ್ಕೆ ಈ ಇಬ್ಬರು ಮಹಿಳೆಯರೇ ಕಾರಣ ಎಂದು ಹೇಳಿದರು.
ಜನರನ್ನು ತಪ್ಪು ದಾರಿಗೆಳೆಯಲು ಧರ್ಮ, ರಾಷ್ಟ್ರದ ಭಕ್ತಿಯನ್ನು ಬಿಂಬಿಸಲಾಗುತ್ತದೆ. ಶೇ. 99 ಮಂದಿ ಅಲ್ಪಸಂಖ್ಯಾತರು ಸರಕಾರಿ ಕೆಲಸದಲ್ಲಿಲ್ಲ. ಸ್ವಂತ ಶ್ರಮದ ಮೇಲೆ ತಮ್ಮ ಜೀವನವನ್ನು ಕಟ್ಟಿಕೊಂಡು ಈ ದೇಶಸೇವೆ ಮಾಡುತ್ತಿದ್ದಾರೆ. ಇವತ್ತೇನಾದರೂ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆದರೆ, ಅದು ಸಂವಿಧಾನದ ಮೇಲೆ ನಡೆದ ದಾಳಿಯಾಗುತ್ತದೆ. ದಲಿತರ ಮೇಲೆ ಅತ್ಯಾಚಾರ ನಡೆದರೆ ಅದು ಸಂವಿಧಾನದ ಮೇಲೆ ನಡೆದ ಅತ್ಯಾಚಾರವಾಗುತ್ತದೆ ಎಂದರು.
PublicNext
07/06/2022 06:56 pm