ವರದಿ: ರಹೀಂ ಉಜಿರೆ
ಕೋಟ: ಮೆಹೆಂದಿ ಸಂದರ್ಭ ಪೊಲೀಸರೇ ದೌರ್ಜನ್ಯ ನಡೆಸಿದ್ದರೂ ಆ ಪೊಲೀಸರೇ ಸಂತ್ರಸ್ತರ ವಿರುದ್ಧ ಪ್ರತಿದೂರು ದಾಖಲಿಸಿರುವುದರಿಂದ ಸಂತ್ರಸ್ತ ಕೊರಗ ಕುಟುಂಬಗಳು ಕಂಗಾಲಾಗಿವೆ.
ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಸಚಿವರೂ ತಮ್ಮ ಮನೆಗೆ ಭೇಟಿ ನೀಡಿ ಹೋದ ಕೆಲವೇ ಗಂಟೆಗಳಲ್ಲಿ ತಮ್ಮ ವಿರುದ್ಧವೇ FIR ದಾಖಲಾಗಿರುವುದರಿಂದ ಈ ಕುಟುಂಬಗಳು ಆತಂಕಕ್ಕೀಡಾಗಿವೆ. ಯಾವುದೇ ಸಚಿವರು ಬಂದು ಏನೇ ಮಾಡಿದರೂ ಭರವಸೆ ಮೂಡುತ್ತಿಲ್ಲ. ತಮ್ಮ ಮೇಲೆ ದಾಖಲಿಸಿರುವ ಪ್ರಕರಣ ವಾಪಸ್ ಪಡೆಯದ ಹೊರತು ಇವರಿಗೆ ನೆಮ್ಮದಿ ಇಲ್ಲ. ಒಂದು ವೇಳೆ ಮತ್ತೆ ಪ್ರಕರಣ ತೀವ್ರತೆ ಪಡೆದುಕೊಂಡರೆ ಹೋರಾಟ ನಡೆಸುವುದಾಗಿ ಸ್ವತಃ ಮದುಮಗ ರಾಜೇಶ್ ತಿಳಿಸಿದ್ದಾರೆ.
ಇನ್ನು, ದೂರು ವಾಪಸ್ ಪಡೆಯದಿದ್ದರೆ ಪ್ರತಿಭಟನೆ ನಡೆಸುತ್ತೇವೆ. ಜಿಲ್ಲಾಧಿಕಾರಿ ಕಚೇರಿ ಎದುರೇ ಹೋಗಿ ಧರಣಿ ಕೂರುತ್ತೇವೆ ಎಂದು ಕೊರಗ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಏನೇ ಇರಲಿ, ಗೃಹಸಚಿವರ ಈ ಸೌಹಾರ್ದ ಭೇಟಿ ಅನೇಕ ಕಾರಣಗಳಿಗೆ ಗಮನ ಸೆಳೆದಿತ್ತು. ತನ್ನ ಇಲಾಖೆ ಸಿಬ್ಬಂದಿ ಮಾಡಿದ ತಪ್ಪಿಗೆ ಗೃಹಸಚಿವರೇ ಬಂದು ಸಾಂತ್ವನ ಹೇಳಿದ್ದು ವಿಶೇಷವಾಗಿತ್ತು. ಸಚಿವರು ಕೊಟ್ಟ ಮಾತು ಉಳಿಸಿಕೊಂಡರೆ ಕರಾವಳಿಯ ಕಟ್ಟಕಡೆಯ ಈ ಕೊರಗ ಸಮುದಾಯಕ್ಕೆ ಆಡಳಿತ ವ್ಯವಸ್ಥೆ ಮೇಲೆ ನಂಬಿಕೆ ಉಳಿಯಬಹುದು.
PublicNext
01/01/2022 06:15 pm