ಮಂಗಳೂರು: ಸಣ್ಣಪುಟ್ಟ ಲೋಪದೋಷಗಳನ್ನು ಹೊರತುಪಡಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಹಮ್ಮಿಕೊಂಡಿರುವ ‘ಕನ್ನಡವನ್ನು ಕಾಣಿಸಿ, ಕನ್ನಡವನ್ನು ಕೇಳಿಸಿ’ ಅಭಿಯಾನವು ದ.ಕ. ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ.
ಕಳೆದ ಎರಡು ದಿನಗಳಿಂದ ಜಿಲ್ಲೆಯ ವಿವಿಧೆಡೆಗಳಿಗೆ ಭೇಟಿ ನೀಡಿ ಕನ್ನಡ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಕೆಲವೆಡೆ ಸಣ್ಣಪುಟ್ಟ ಲೋಪಗಳಿದ್ದು, ಸಂಬಂಧಿತ ಸಂಸ್ಥೆಗಳ ಅಧಿಕಾರಿಗಳು ತಪ್ಪು ಒಪ್ಪಿಕೊಂಡಿದ್ದಾರೆ. ಅಲ್ಲದೆ ಈ ತಪ್ಪುಗಳನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ. ಮುಂದಕ್ಕೆ ಜಿಲ್ಲಾಡಳಿತ ಇದರ ಬಗ್ಗೆ ನಿಗಾ ವಹಿಸಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್. ನಾಗಾಭರಣ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಅನುಷ್ಠಾನಗೊಳ್ಳುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಂಡ ಬಳಿಕ ಮಾತೃಭಾಷೆಗೆ ಆದ್ಯತೆ ಸಿಗಲಿದೆ.
ಬ್ಯಾಂಕ್ ಗಳಲ್ಲಿ ಸಿಬ್ಬಂದಿ ಕನ್ನಡ ಕಲಿಯಬೇಕು, ವ್ಯವಹಾರವನ್ನು ಕನ್ನಡದಲ್ಲೇ ನಡೆಸಬೇಕು, ಚೆಕ್ ಪುಸ್ತಕ, ಚಲನ್ ಕನ್ನಡದಲ್ಲಿ ಮುದ್ರಿಸಬೇಕು ಎಂದು ಸೂಚಿಸಲಾಗಿದೆ ಎಂದರು.
ನಗರದ ಎಂಆರ್ಪಿಎಲ್ ಸಂಸ್ಥೆಗೆ ನಿನ್ನೆ ಭೇಟಿ ನೀಡಿ, ಅಲ್ಲಿಯೂ ಕನ್ನಡ ಅನುಷ್ಠಾನಕ್ಕೆ ಸೂಚಿಸಲಾಗಿದೆ. ಎಂಆರ್ಪಿಎಲ್ ಸಂಸ್ಥೆಯ ಅಧಿಕಾರಿಗಳು ತ್ರಿಭಾಷಾ ಸೂತ್ರದಂತೆ ಕನ್ನಡ ನಾಮಫಲಕಗಳನ್ನು ಅಳವಡಿಕೆ ಮಾಡಲು ಒಪ್ಪಿಕೊಂಡಿದ್ದಾರೆ.
2021ರಲ್ಲಿ ಎಂಆರ್ ಪಿಎಲ್ ನಲ್ಲಿ ನಡೆದಿರುವ ನೇಮಕಾತಿಯಲ್ಲಿ 170 ಮಂದಿಯ ಪೈಕಿ 14 ಮಂದಿ ಕನ್ನಡಿಗರಿದ್ದರು. ನೇಮಕಾತಿ ಪರೀಕ್ಷೆಗೆ ಕನ್ನಡಿಗರು ಕಡಿಮೆ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿರುವುದೇ ಈ ಕಡಿಮೆ ನೇಮಕಾತಿಗೆ ಕಾರಣ. ಆದರೆ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ. ಈ ಬಗ್ಗೆ ಸಂಬಂಧಿತ ಸಚಿವಾಲಯಕ್ಕೆ ಪತ್ರ ಬರೆಯುವಂತೆ ಸೂಚಿಸಲಾಗಿದೆ. ಕನ್ನಡಿಗರಿಗೆ ಉದ್ಯೋಗ ನೀಡುವಂತಾಗಲು ಕೇಂದ್ರ ಸಚಿವರ ಜತೆ ನಾನು ಮಾತನಾಡುತ್ತೇನೆ ಎಂದು ಟಿ.ಎಸ್. ನಾಗಾಭರಣ ಹೇಳಿದರು.
PublicNext
08/04/2022 07:43 pm