ಮುಲ್ಕಿ: ಮುಲ್ಕಿ ಹೋಬಳಿಯ ಏಳು ಪಂಚಾಯಿತಿಗಳಲ್ಲಿ ಬೆಳಗಿನ ಬಿರುಸಿನ ಮತದಾನ ನಡೆದಿದ್ದು, ಮತಗಟ್ಟೆ ವ್ಯವಸ್ಥೆ ಪರಿಶೀಲಿಸಲು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಕೆಲವು ಮತಗಟ್ಟೆಗಳಿಗೆ ಭೇಟಿ ನೀಡಿದ್ದಾರೆ.
ಅತಿಕಾರಿಬೆಟ್ಟು, ಕಿಲ್ಪಾಡಿ, ಐಕಳ, ಬಳ್ಕುಂಜೆ, ಕೆಮ್ರಾಲ್, ಹಳೆಯಂಗಡಿ, ಪಡುಪಣಂಬೂರು ಪಂಚಾಯಿತಿಗಳಲ್ಲಿ ಬೆಳಗ್ಗಿನಿಂದಲೂ ಮತದಾರರು ಹುರುಪಿನಿಂದ ಧಾವಿಸಿದ್ದಾರೆ. ಕೊರೊನಾ ನಿಯಮಾವಳಿಯಂತೆ ಮತದಾರರನ್ನು ಒಳಗೆ ಬಿಡಲಾಗುತ್ತಿತ್ತು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರು ಡಾ.ಪೀಟರ್ ಪೌಲ್ ಸಲ್ಡಾನ ಪೊಂಪೈ ಕಾಲೇಜಿನಲ್ಲಿ ಮತದಾನ ಮಾಡಿದರು. ಪೊಲೀಸರ ಬಿಗಿ ಬಂದೋಬಸ್ತ್ ನಡುವೆ ಹೋಬಳಿಯ ಕೆಲವು ಕಡೆ ಮಾತಿನ ಚಕಮಕಿ ನಡೆದಿದೆ. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಸಹಾಯಕ ಆಯುಕ್ತ ಮದನ್ ಮೋಹನ್ ಹಳೆಯಂಗಡಿ, ಪಡುಪಣಂಬೂರು, ಕೆಮ್ರಾಲ್ ಪಂಚಾಯಿತಿ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಲ್ಕಿ ಹೋಬಳಿಯ ಕಂದಾಯ ನಿರೀಕ್ಷಕ ಸಂತೋಷ್ ಮತದಾನ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ಸೋಮವಾರ ರಾತ್ರಿ ಹಳೆಯಂಗಡಿ ಇಂದಿರಾ ನಗರದಲ್ಲಿ ಕಾಂಗ್ರೆಸ್- ಎಸ್ಡಿಪಿಐ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸರು ಸಕಾಲದಲ್ಲಿ ಆಗಮಿಸಿ ಗಲಾಟೆ ತಪ್ಪಿಸಿದ್ದಾರೆ.
ಪಡುಪಣಂಬೂರು ಗ್ರಾ.ಪಂ. ವ್ಯಾಪ್ತಿಯ ಪಡುತೋಟ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕೆಲಕಾಲ ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು. ಉಳಿದಂತೆ ಎಲ್ಲ ಕಡೆ ಮತದಾನ ಶಾಂತಿಯುತವಾಗಿ ನಡೆದಿದೆ. ಮುಲ್ಕಿ ಹೋಬಳಿ ಮತಗಟ್ಟೆಗಳಿಗೆ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್ ಆಳ್ವ, ಕೆಪಿಸಿಸಿ ಕೋಆರ್ಡಿನೇಟರ್ ವಸಂತ್ ಬೆರ್ನಾಡ್ ಭೇಟಿ ನೀಡಿ ಕಾರ್ಯಕರ್ತರಿಗೆ ಉತ್ಸಾಹ ತುಂಬಿದರು.
Kshetra Samachara
22/12/2020 05:29 pm