ಉಡುಪಿ: ಕೃಷಿ ಹೋರಾಟಗಾರರ ವಿರುದ್ಧ ಗುಡುಗಿದ ಶೋಭಾ ಕರಂದ್ಲಾಜೆ,ಅವರ ಹೋರಾಟ ಕೇವಲ ಡೋಂಗಿತನದಿಂದ ಕೂಡಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು,ರೈತ ಚಳುವಳಿಯಲ್ಲಿ ದೇಶ ವಿರೋಧಿ ಪ್ರತ್ಯೇಕವಾದಿಗಳ ಪರ ಘೋಷಣೆ ಮೊಳಗುತ್ತಿದೆ. ಉಗ್ರರ ಬೆಂಬಲಿಗರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಲಾಗುತ್ತಿದೆ. ಖಾಲಿಸ್ತಾನ್ ಮೂಮೆಂಟ್ ಕಾರ್ಯಕರ್ತರು ಈ ಹೋರಾಟದ ಹಿಂದೆ ಇದ್ದಾರೆ ಎಂದು ಹೇಳಿದ್ದಾರೆ.
ದೇಶದ 338 ಸಂಸದರಲ್ಲಿ 18 ಜನ ಸಿಖ್ಖರು ಸಂಸದರಾಗಿದ್ದಾರೆ.ದೇಶದಲ್ಲಿ ಸಿಖ್ ಸಮಾಜದ ವಿರುದ್ಧ ಯಾವುದೇ ರೀತಿ ತಾರತಮ್ಯ ನಡೆದಿಲ್ಲ.ಆದರೂ ಜನಾಂಗೀಯ ತಾರತಮ್ಯದ ಆರೋಪವನ್ನು ಕೇಂದ್ರ ಸರಕಾರದ ಮೇಲೆ ಹೊರಿಸಲಾಗುತ್ತಿದೆ.
ಭಾರತದ ಆಂತರಿಕ ವಿಚಾರದಲ್ಲಿ ಕೆನಡಾ ಪ್ರಧಾನಿ ಮೂಗು ತೂರಿಸುತ್ತಿದ್ದಾರೆ.ಇದರಲ್ಲಿ ಕೆನಡಾದಲ್ಲಿ ನೆಲೆಸಿರುವ ಸಿಖ್ ಮುಖಂಡರ ಕೈವಾಡವಿದೆ.
ಪಂಜಾಬಿನಲ್ಲಿ ಎಪಿಎಂಸಿ ಲಾಬಿ ನಡೆಸುವವರಲ್ಲಿ ಎಲ್ಲಾ ಪಕ್ಷದವರು ಇದ್ದಾರೆ.ಮಧ್ಯವರ್ತಿಗಳ ಹಿತ ಕಾಪಾಡಲು ಈ ಹೋರಾಟ ನಡೆಯುತ್ತಿದೆ.ರಾಜ್ಯದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಹೋರಾಟ ನಡೆಯಿತು.ಈ ಹೋರಾಟದಲ್ಲಿ ಸಿದ್ದರಾಮಯ್ಯ ,ಡಿಕೆ ಶಿವಕುಮಾರ್ ಮೊದಲಾದ ಕಾಂಗ್ರೆಸ್ಸಿಗರು ಭಾಗವಹಿಸಿದ್ದರು.ರೈತ ಹೋರಾಟದ ಹಿಂದೆ ಕಾಂಗ್ರೆಸ್ಸಿನ ಕೈವಾಡ ಎದ್ದು ಕಾಣುತ್ತಿದೆ.
ರೈತ ಹೋರಾಟದಲ್ಲಿ ತುಕಡೆ ತುಕಡೆ ಗ್ಯಾಂಗ್ ಮತ್ತು ನಗರ ನಕ್ಸಲರ ಪಾತ್ರವಿದೆ ಎಂದು ಉಡುಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.
Kshetra Samachara
18/12/2020 12:14 pm