ಮುಲ್ಕಿ: ಹಳೆಯಂಗಡಿ ಗ್ರಾಮ ಪಂಚಾಯತ್ ನ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 14ನೇ ಹಣಕಾಸು ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮ ಸಭೆ ಹಳೆಯಂಗಡಿ ರಾಜೀವಗಾಂಧಿ ಸಭಾಭವನದಲ್ಲಿ ನಡೆಯಿತು.
ಸಭೆ ಆರಂಭವಾಗುತ್ತಿದ್ದಂತೆ ಗ್ರಾಮಸ್ಥ ಮಹಾಬಲ ಸಾಲ್ಯಾನ್ ಸಭೆಯಲ್ಲಿ ಗ್ರಾಮಸ್ಥರ ಕೊರತೆ ಬಗ್ಗೆ ಪ್ರಸ್ತಾಪಿಸಿ ಗ್ರಾಮ ಪಂಚಾಯತ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಉದ್ಯೋಗ ಖಾತರಿ ಯೋಜನೆಯ ಫಲಾನುಭವಿಗಳು ಎಲ್ಲಿದ್ದಾರೆ? ಎಂದು ಗ್ರಾಮಸ್ಥ ವಿನೋದ್ ಪ್ರಶ್ನಿಸಿದರು. ಗ್ರಾಮಸ್ಥ ಮಹಾಬಲ ಸಾಲ್ಯಾನ್ ಮಾತನಾಡಿ ನರೇಗಾ ಯೋಜನೆಯಲ್ಲಿ ಬಾವಿ ತೋಡಿದ ಪಲಾನುಭವಿಗಳಿಗೆ ಇದುವರೆಗೂ ಹಣ ಸಂದಾಯವಾಗಿಲ್ಲ.
ಇವತ್ತಿನ ಸಭೆಗೆ ಫಲಾನುಭವಿಗಳಿಗೆ ಹೇಳದೆ ಗ್ರಾಮ ಪಂಚಾಯತಿಯಲ್ಲಿ ಕಡತವನ್ನು ಮುಚ್ಚಿದ್ದಾರೆ. ಇನ್ನೊಂದೆಡೆ ಫಲಾನುಭವಿಗಳು ಬಕಪಕ್ಷಿಗಳಂತೆ ಹಣಕ್ಕಾಗಿ ಕಾಯುತ್ತಿದ್ದಾರೆ ಈ ಬಗ್ಗೆ ಸೂಕ್ತ ಉತ್ತರ ನೀಡಬೇಕಾದ ಪಂಚಾಯತ್ ಆಡಳಿತ ಅಧಿಕಾರಿ ಹಾಗೂ ಅಭಿವೃದ್ಧಿ ಅಧಿಕಾರಿ ಸಭೆಗೆ ಗೈರು ಹಾಜರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಸೂಕ್ತ ಉತ್ತರ ನೀಡುವಂತೆ ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ತಾಲೂಕು ಸಂಯೋಜಕರಾದ ಧನಲಕ್ಷ್ಮಿ ರವರು ಕೂಡಲೇ ಪಂಚಾಯತ್ ಸಿಬ್ಬಂದಿಗಳ ಬಳಿ ಕಡತಗಳನ್ನು ತರುವಂತೆ ಸೂಚಿಸಿ ಕಾಮಗಾರಿಗಳ ಬಗ್ಗೆ ಪರಿಶೀಲಿಸಿ ಕಾಮಗಾರಿಗಳನ್ನು ಮಾಡಿರುವವರಿಗೆ ಹಣ ಪಾವತಿ ಮಾಡಲು ಪಂಚಾಯತ್ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸಭೆಯಲ್ಲಿ ನಿರ್ಣಯ ಮಾಡಲಾಯಿತು.
ಸಭೆಯಲ್ಲಿ ಗ್ರಾಮಸ್ಥ ಮಹಾಬಲ ಸಾಲ್ಯಾನ್ ಮಾತನಾಡಿ ಪಂಚಾಯತ್ ನಿಂದ 18 ಲಕ್ಷ ವೆಚ್ಚದಲ್ಲಿ ಕಸ ತ್ಯಾಜ್ಯ ವಿಲೇವಾರಿ ಘಟಕ ಮಾಡಿದ್ದರೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಂಚಾಯತ್ ಪಿಡಿಒ ಸೂಚನೆ ಮೇರೆಗೆ ಸಿಬ್ಬಂದಿಗಳು ಕಸ ಹಾಕಿ ಬೆಂಕಿ ಕೊಡುತ್ತಿದ್ದಾರೆ ಯಾಕೆ? ಎಂದು ಅಸಮಾಧಾನ ವ್ಯಕ್ತಪಡಿಸಿ ಪಂಚಾಯತ್ ಪಿಡಿಒ ನಿರ್ಲಕ್ಷ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಸಿಹಿತ್ಲು ಮುಂಡಾ ಬೀಚ್ ಬಳಿ 4 ಲಕ್ಷ ವೆಚ್ಚದಲ್ಲಿ ಪಾದಾಚಾರಿ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು ಸೂಕ್ತ ತನಿಖೆ ನಡೆಸಿ ಬಳಿಕ ಹಣ ಪಾವತಿಸುವಂತೆ ವಿನೋದ್ ಆಗ್ರಹಿಸಿದರು. ಕಾಮಗಾರಿ ನಡೆಸದೆ ಪಂಚಾಯಿತಿಯಲ್ಲಿ 93 ಲಕ್ಷದವರೆಗೆ ಉಳಿಕೆ ಯಾಗಿದ್ದು ಸರಿಯಾದ ರೀತಿಯಲ್ಲಿ ಅನುದಾನ ಕಾಮಗಾರಿಗಳಿಗೆ ಉಪಯೋಗವಾಗುವಂತೆ ನೋಡಿಕೊಳ್ಳಲು ಗ್ರಾಮಸ್ಥ ವಿನೋದ್ ಒತ್ತಾಯಿಸಿದರು.
ಸಭೆಯ ನೋಡಲ್ ಅಧಿಕಾರಿಯಾಗಿ ತೋಟಗಾರಿಕಾ ಸಹಾಯಕ ನಿರ್ದೇಶಕ ಕೆ ಪ್ರವೀಣ್, ಜಿ. ಪಂ. ಸದಸ್ಯ ವಿನೋದ್ ಬೊಳ್ಳೂರು, ತಾ. ಪಂ. ಸದಸ್ಯ ಜೀವನ್ ಪ್ರಕಾಶ್, ತಾಂತ್ರಿಕ ಸಂಯೋಜಕ ಅಜಿತ್ , ಪಂಚಾಯತ್ ಕಾರ್ಯದರ್ಶಿ ಶ್ರೀಶೈಲ ಉಪಸ್ಥಿತರಿದ್ದರು.
Kshetra Samachara
27/11/2020 02:22 pm