ಉಡುಪಿ: ಕಳೆದ ಒಂದು ದಶಕದಿಂದ ಕರಾವಳಿ ಭಾಗದಲ್ಲಿ ದೇವಾಲಯದ ಜೀರ್ಣೋದ್ಧಾರದ ಸಂಕ್ರಮಣ ಕಾಲ ಆರಂಭವಾಗಿದೆ. ಆರಾಧನೆ ಅನುಷ್ಠಾನಗಳು ನಿಂತು ಹೋದ ಅನೇಕ ದೇವಸ್ಥಾನಗಳು ಮತ್ತೆ ಪ್ರವರ್ಧಮಾನಕ್ಕೆ ಬರುತ್ತಿರುವುದನ್ನು ನಾವು ಕಂಡಿದ್ದೇವೆ.
ಕಾರ್ಕಳದ ಅತ್ತೂರು ಗ್ರಾಮದಲ್ಲಿರುವ ಪರ್ಪಲೆ ಗುಡ್ಡದಮೇಲೆ ಅನೇಕ ಶತಮಾನಗಳಿಂದ ಸುಪ್ತಾವಸ್ಥೆಯಲ್ಲಿರುವ ದೈವ ಸಾನಿದ್ಯವನ್ನು ಮತ್ತೆ ಜಾಗೃತ ಸ್ಥಿತಿಗೆ ತರಲು ಗ್ರಾಮಸ್ಥರು ಮುಂದಾಗಿದ್ದಾರೆ.
ಕಾರ್ಕಳ ನಗರ ಮತ್ತು ಅತ್ತೂರು ಸುತ್ತಮುತ್ತ ಹಲವಾರು ಕಡೆ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮುಂದಾದಾಗ ಈ ಕ್ಷೇತ್ರದ ಜೀರ್ಣೋದ್ಧಾರವನ್ನು ಮೊದಲು ಮಾಡತಕ್ಕದ್ದು ಎಂದು ಅಷ್ಟಮಂಗಲ ಪ್ರಶ್ನೆಗಳಲ್ಲಿ ಕಂಡು ಬಂದಿರುತ್ತದೆ.
ಇಲ್ಲಿ ದೈವೀಶಕ್ತಿಗಳು ಚರಾವಸ್ಥೆಯಲ್ಲಿ ಇರುವುದರಿಂದ ಗ್ರಾಮಸ್ಥರಿಗೆ ಅನೇಕ ರೀತಿಯ ಸಮಸ್ಯೆಗಳು ಎದುರಾದ ಉದಾಹರಣೆ ಇದೆ. ಸೂಕ್ತ ಮುಂದಾಳತ್ವ ಇಲ್ಲದ ಕಾರಣ ಈ ಜೀರ್ಣೋದ್ಧಾರ ಕಾರ್ಯಕ್ಕೆ ಯಾರೂ ಕೂಡ ಕೈಹಾಕಿರಲಿಲ್ಲ.
ಈಗ ಈ ಭಗವತ್ ಕಾರ್ಯಕ್ಕೆ ಹಿಂದೂ ಜಾಗರಣ ವೇದಿಕೆ ಮುಂದಾಳತ್ವ ವಹಿಸಿಕೊಂಡಿದ್ದು,ಜಿಲ್ಲೆಯ ಆಸ್ತಿಕ ಭಕ್ತರ ಸಂಪೂರ್ಣ ಬೆಂಬಲ ಇದಕ್ಕೆ ಲಭಿಸಿದೆ.
ಸಾನಿಧ್ಯ ಪುನರ್ನಿರ್ಮಾಣ ನಿಮಿತ್ತ ಅತ್ತೂರು ಪರ್ಪಲೆಗಿರಿಯಲ್ಲಿ ಇದೇ ತಿಂಗಳ 26,27,28 ರಂದು ಅಷ್ಟಮಂಗಲ ಪ್ರಶ್ನಾ ಚಿಂತನೆ ಆಯೋಜಿಸಲಾಗಿದ್ದು, ಕೇರಳದ ಪಯ್ಯನ್ನೂರಿನ ಖ್ಯಾತ ದೈವಜ್ಞ ರಾದ ಶ್ರೀ ನಾರಾಯಣ ಪೊದುವಾಲ್ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಮೂರು ದಿನಗಳ ಪರ್ಯಂತ ನಡೆಯಲಿರುವ ಅಷ್ಟಮಂಗಲ ಪ್ರಶ್ನಾ ಚಿಂತನೆಗೆ ನಾಡಿನ ವಿವಿಧ ಭಾಗಗಳಿಂದ ಗಣ್ಯರು ಆಗಮಿಸಲಿದ್ದಾರೆ. ಈ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಾರ್ಕಳದ ಇತಿಹಾಸಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳು ಮುನ್ನೆಲೆಗೆ ಬರುವ ಸಾಧ್ಯತೆ ಇದ್ದು, ಹೀಗಾಗಿ ಈ ಕಾರ್ಯಕ್ರಮ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ ಎಂದು ಶ್ರೀ ಪ್ರಶಾಂತ ನಾಯಕ್ ಶ್ರೀ ಕೃಷ್ಣಗಿರಿ ಕಲ್ಕುಡ ದೈವಸ್ಥಾನ ಟ್ರಸ್ಟ್ ಕಾರ್ಕಳ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
Kshetra Samachara
24/11/2020 12:11 pm