ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರೈತರ ಸಂಘಟನೆ ಹತ್ತಿಕ್ಕುವುದೇ ಕೃಷಿ ತಿದ್ದುಪಡಿಯ ಹುನ್ನಾರ: ಜಸ್ಟಿಸ್ ನಾಗಮೋಹನ್ ದಾಸ್

ಮಂಗಳೂರು: ಕೇಂದ್ರ ಮತ್ತು ರಾಜ್ಯ ಸರಕಾರಗಳ ರೈತ, ದಲಿತ, ಕಾರ್ಮಿಕ ಮತ್ತು ಜನ ವಿರೋಧಿ ಮಸೂದೆಗಳನ್ನ ಹಿಂತೆಗೆಯಲು ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರೈತ ದಲಿತ ಕಾರ್ಮಿಕ ಜನಪರ ಚಳುವಳಿಗಳ ಒಕ್ಕೂಟ ವತಿಯಿಂದ ನಡೆಯುತ್ತಿದ್ದ ವಾಹನ ಜಾಥಾ ಮತ್ತು ಬಹಿರಂಗ ಸಭೆಯ ಸಮಾರೋಪ ಸಮಾರಂಭ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.

ಹೈಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಾಧೀಶ ಜಸ್ಟಿಸ್ ನಾಗಮೋಹನ್ ದಾಸ್ ಸಮಾರೋಪ ಸಮಾರಂಭವನ್ನ ಆನ್ ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದರು. "ಮಾರುಕಟ್ಟೆಯಲ್ಲಿ ಎದುರಾದ ಅಸಮತೋಲನದಿಂದ ರೈತರು ಉತ್ಪಾದನಾ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ತಮ್ಮ ಫಸಲು ಮಾರುವಂತಾಗಿದೆ.

ಆದ್ದರಿಂದ ಆರ್ಥಿಕ ದಿವಾಳಿತ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಆತ್ಮಹತ್ಯೆ ದಾರಿ ಹಿಡಿಯುವಂತಾಗಿದೆ. ಕೇವಲ ಆರ್ಥಿಕವಾಗಿ ಮಾತ್ರವಲ್ಲದೇ ರೈತರು ಸಾಂಸ್ಕೃತಿಕ, ಸಾಮಾಜಿಕ ದಿವಾಳಿತನವನ್ನೂ ಎದುರಿಸುತ್ತಿದ್ದಾರೆ. ತಮ್ಮದೇ ಜಮೀನುಗಳಿದ್ದರೂ ನಗರದತ್ತ ಮುಖ ಮಾಡಿದ್ದಾರೆ‌. ಈ ನಡುವೆ ಸರಕಾರ ಹೊಸ ಕಾಯ್ದೆ, ತಿದ್ದುಪಡಿಗಳನ್ನ ಮುಂದಿಡುತ್ತಿದೆ.

ಇದೆಲ್ಲವೂ ಜಾರಿಗೆ ಬಂದರೆ ರೈತರ ಹಿತಕ್ಕೆ ದೊಡ್ಡ ಏಟು ಬೀಳಲಿದೆ. ಇಂತಹ ಕಾಯ್ದೆಗಳ ಮೂಲಕ ಕಾರ್ಪೊರೇಟ್ ಕಂಪೆನಿಗಳ ಕೈಗೆ ಭೂಮಿ ಹೋಗಿ ರೈತರ ಸಂಘಟಿತ ಹೋರಾಟ ಹತ್ತಿಕ್ಕುವ ಹುನ್ನಾರವೂ ಇದರ ಹಿಂದೆ ಇದೆ. ಅಲ್ಲದೇ ಇದರಿಂದ ಗ್ರಾಹಕನ ಖರೀದಿ ಬೆಲೆ ಮೇಲೂ ಸಾಕಷ್ಟು ಕೆಟ್ಟ ಪರಿಣಾಮ ಬೀರಲಿದೆ.

ಹೀಗಾಗಿ ಹಳ್ಳಿಗಳು ಮತ್ತು ರೈತರು ನಾಶವಾಗುವ ದಿನವನ್ನ ಎದುರು ನೋಡಬೇಕಾದೀತು" ಎಂದರು. ಕಾರ್ಯಕ್ರಮದಲ್ಲಿ ಪ್ರಕಾಶ್ ಕಮ್ಮರಡಿ, ಸುನಿಲ್ ಕುಮಾರ್ ಬಜಾಲ್, ಯಾದವ ಶೆಟ್ಟಿ, ವಸಂತ ಆಚಾರಿ, ರವಿಕಿರಣ್ ಪುಣಚ, ಎಸ್.ಪಿ. ಚೆಂಗಪ್ಪ ಮೊದಲಾದವರು ಉಪಸ್ಥಿತರಿದ್ದರು. ಸಮಾರೋಪ ಸಮಾರಂಭಕ್ಕೂ ಮುನ್ನ ನಗರದ ಜ್ಯೋತಿ ಅಂಬೇಡ್ಕರ್ ಸರ್ಕಲ್ ನಿಂದ ಪುರಭವನದವರೆಗೆ ಕಾಲ್ನಡಿಗೆ ಜಾಥಾ ನಡೆಯಿತು.

Edited By : Manjunath H D
Kshetra Samachara

Kshetra Samachara

23/11/2020 01:30 pm

Cinque Terre

7.5 K

Cinque Terre

1

ಸಂಬಂಧಿತ ಸುದ್ದಿ