ಉಡುಪಿ: ಕರ್ನಾಟಕ ರಾಜ್ಯ ವಿಧಾನ ಸಭೆಯಲ್ಲಿ ಮೊಗವೀರ ಸಮುದಾಯಕ್ಕೆ ಸೇರಿದ ಮೀನುಗಾರರ ಸಮುದಾಯದ ಏಕೈಕ ಪ್ರತಿನಿಧಿಯಾದ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ರವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿದ ಮೊಗವೀರ ಹಿತಸಾಧನಾ ವೇದಿಕೆಯ ಮುಖಂಡರು,ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪನವರ ನೇತ್ರತ್ವದ ಸರಕಾರವಿದೆ. ಗಂಗಾಮತ/ಮೊಗವೀರ ಸಮುದಾಯಕ್ಕೆ ಸೇರಿದ 80 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇದೆ.ಆದರೂ ಮೊಗವೀರ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡದೆ, ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂಬ ಕೊರಗು ನಮ್ಮನ್ನು ಕಾಡುತ್ತಿದೆ.
ದೇಶದ ಎಲ್ಲಾ ರಾಜ್ಯಗಳಲ್ಲಿಯೂ ನಮ್ಮ ಸಮುದಾಯದ ಚುನಾಯಿತ ಜನ ಪ್ರತಿನಿಧಿಗಳ ಬೇರೆ ಪಕ್ಷಗಳಿಂದ ಆಯ್ಕೆಯಾಗಿ ಆಯಾ ರಾಜ್ಯದ ಆಡಳಿತ ಪಕ್ಷಗಳ ಮೂಲಕ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿರುತ್ತದೆ.
ಅಷ್ಟೆ ಅಲ್ಲ, ಕರ್ನಾಟಕದಲ್ಲಿಯೂ ಕೂಡ ಈ ಹಿಂದಿನ ಎಲ್ಲಾ ಸರಕಾರಗಳು ಮೀನುಗಾರರ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುತ್ತಾ ಬಂದಿವೆ. ಆದರೆ ಭಾರತೀಯ ಜನತಾ ಪಕ್ಷ ಮಾತ್ರ ನಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ನೀಡದೆ ಮೊಗವೀರ ಸಮುದಾಯವನ್ನು ನಿರ್ಲಕ್ಷಿಸುತ್ತಿರುವುದು ಬಹಳ ಖೇದಕರ. ನಮ್ಮ ಸಮುದಾಯದ ಬಗ್ಗೆ ಈ ರೀತಿಯ ಜಾಣಾ ಕುರುಡನ್ನು ನಾವು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ.
ನಮ್ಮ ಸಮುದಾಯದ ಬಹುತೇಕ ಜನರು ಭಾರತೀಯ ಜನತಾ ಪಕ್ಷದ ಮತದಾರರು.ಹೀಗಾಗಿ ಈ ಬಾರಿ ಸಚಿವ ಸಂಪುಟ ವಿಸ್ತರಣೆ ಸಂದರ್ಭ ಲಾಲಾಜಿ ಮೆಂಡನ್ ರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಮೊಗವೀರ ಮುಖಂಡರು ಆಗ್ರಹಿಸಿದ್ದಾರೆ.
Kshetra Samachara
23/11/2020 11:49 am