ಉಡುಪಿ: 2019 - 20 ನೇ ಸಾಲಿನ ಬಜೆಟ್ ನಲ್ಲಿ ಕರ್ನಾಟಕ ಕ್ರೈಸ್ತ ಅಭಿವೃದ್ಧಿ ನಿಗಮ ಮಂಜೂರಾಗಿತ್ತು.ಆದರೆ ಈಗ ಏಕಾಏಕಿ ಸರಕಾರ ನಿಗಮ ಪ್ರಸ್ತಾವನೆಯನ್ನು ಕೈಬಿಟ್ಟಿರುವುದು ತುಂಬ ನೋವಾಗಿದೆ.ಕರ್ನಾಟಕದಲ್ಲಿರುವ ಲಕ್ಷಾಂತರ ಕ್ರೈಸ್ತರ ಕನಸುಗಳು ನುಚ್ಚು ನೂರಾಗಿವೆ ಎಂದು ಉಡುಪಿಯ ಕ್ರೈಸ್ತ ಸಂಘಟನೆಗಳು ಹೇಳಿವೆ.
ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿದ ಕ್ರೈಸ್ತ ಸಂಘಟನೆಗಳ ಮುಖಂಡರು ಸರ್ಕಾರವು ಸಣ್ಣಪುಟ್ಟ ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪಿಸುತ್ತಿದೆ. ಆದರೆ ಲಕ್ಷಾಂತರ ಜನಸಂಖ್ಯೆ ಇರುವ ಕ್ರೈಸ್ತ ಸಮುದಾಯದ ಅಭಿವೃದ್ಧಿ ನಿಗಮ ಮಾಡುವುದಾಗಿ ಹೇಳಿ ಈಗ ಪ್ರಸ್ತಾವನೆಯನ್ನೇ ಕೈಬಿಟ್ಟಿದೆ.ಇದರಿಂದ ರಾಜ್ಯಾದ್ಯಂತ ಶಿಕ್ಷಣ ಸೇವೆ, ಸಮಾಜ ಸೇವೆ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಮುದಾಯಕ್ಕೆ ನೋವಾಗಿದೆ. ಇದರಿಂದಾಗಿ ರಾಜ್ಯಾದ್ಯಂತ ಇರುವ ಆರ್ಥಿಕವಾಗಿ ಹಿಂದುಳಿದ ಕ್ರೈಸ್ತರು ಸರಕಾರಿ ಸೌಲಭ್ಯಗಳಿಂದ ವಂಚಿತರಾಗುವ ಸಾಧ್ಯತೆ ಇದೆ. ಬಹಳಷ್ಟು ಬಡ ಕ್ರೈಸ್ತರು ಸರ್ಕಾರದ ಯೋಜನೆಗಳನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಪ್ರಸ್ತಾಪಿತ ಕ್ರೈಸ್ತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಈವರೆಗೆ ಕ್ರೈಸ್ತರಿಗೆ ದೊರಕುತ್ತಿದ್ದ ಸವಲತ್ತುಗಳೊಂದಿಗೆ ಅಲ್ಪಸಂಖ್ಯಾತ ಇಲಾಖೆಯಿಂದ ದೊರಕಬೇಕಿರುವ ಸೌಲಭ್ಯಗಳನ್ನು ಕೂಡ ಸಿಗುವಂತೆ ಮಾಡಬೇಕು ಎಂದು ಕ್ರೈಸ್ತ ಮುಖಂಡರು ಒತ್ತಾಯಿಸಿದ್ದಾರೆ.
Kshetra Samachara
20/11/2020 03:00 pm