ಬಂಟ್ವಾಳ: ಸರ್ಕಾರಕ್ಕೀಗ ಕಾರ್ಪೊರೇಟ್ ಶಕ್ತಿಯನ್ನು ಎದುರಿಸುವ ಶಕ್ತಿ ಇಲ್ಲ. ನಮ್ಮ ದೇಶದ ಆಸ್ತಿಯೆಲ್ಲಾ ಖಾಸಗಿಯವರ ಪಾಲಾಗುವ ದಿನ ದೂರ ಇಲ್ಲ ಎಂದು ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ಆರೋಪಿಸಿದ್ದಾರೆ.
ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯವರ ಪುಣ್ಯಸ್ಮರಣೆಯ ಪ್ರಯುಕ್ತ ಬಂಟ್ವಾಳ ಬ್ಲಾಕ್ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಶನಿವಾರ ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ಆಯೋಜಿಸಲಾದ ಮಾಜಿ ಗೇಣಿದಾರರ ಸಮಾವೇಶವನ್ನುದ್ದೇಶಿಸಿ ಅವರು ಪ್ರಧಾನ ಭಾಷಣ ಮಾಡಿದರು.
ಸಂಖ್ಯಾ ಬಲ ಇಲ್ಲದೆ ಸುಗ್ರೀವಾಜ್ಞೆಗಳನ್ನು ತರುವ ಮೂಲಕ ಸಂಪೂರ್ಣವಾಗಿ ಕಾರ್ಪೊರೇಟ್ ಸಂಸ್ಥೆಗಳ ಒಡೆತನಕ್ಕೆ ಸರ್ಕಾರಿ ಆಸ್ತಿಗಳನ್ನು ಕೊಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಎಪಿಎಂಸಿ, ವಿದ್ಯುತ್ ವಲಯಗಳಷ್ಟೇ ಅಲ್ಲ, ಬ್ಯಾಂಕುಗಳ ಖಾಸಗೀಕರಣವಾದರೂ ಅಚ್ಚರಿ ಇಲ್ಲ ಎಂದರು. ಈ ಹಿನ್ನೆಲೆಯಲ್ಲಿ ಸಂಘಟಿತರಾಗಿ ಧೈರ್ಯಶಾಲಿಗಳಾಗಿ ಮಾತನಾಡದೇ ಇದ್ದರೆ ಮುಂದೊಂದು ದಿನ ನಮ್ಮ ದೇಶ ಕಾರ್ಪೊರೇಟ್ ಹಿಡಿತಕ್ಕೆ ಬರಬಹುದು ಎಂದು ಎಚ್ಚರಿಸಿದ ಅವರು, ಸ್ಚಚ್ಛ ಭಾರತ ಹೆಸರಲ್ಲಿ ನಮ್ಮ ಕೈಯಲ್ಲಿ ಪೊರಕೆ ಹಿಡಿಸಿ, ದೇಶದ ಖಜಾನೆಯನ್ನು ಲೂಟಿಗೈಯುತ್ತಿದ್ದಾರೆ ಎಂದು ರವಿಕಿರಣ್ ಪುಣಚ ಆಪಾದಿಸಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾಜಿ ಗೇಣಿದಾರರು ತಾವಿಂದು ಭೂಮಿಯ ಒಡೆಯರಾಗಲು ಇಂದಿರಾಗಾಂಧಿ ಮತ್ತು ದೇವರಾಜ ಅರಸ್ ಹಾಗೂ ಕಾಂಗ್ರೆಸ್ ಪಕ್ಷ ಸವಾಲುಗಳನ್ನು ಎದುರಿಸಿ ಭೂಮಸೂದೆ ಜಾರಿಗೊಳಿಸಿದ್ದೇ ಕಾರಣ ಎಂಬುದನ್ನು ಮರೆಯಬಾರದು. ಅಂದು ಭೂಮಸೂದೆ ವಿರೋಧಿಸಿದ್ದ ಸಣ್ಣಪುಟ್ಟ ರಾಜಕೀಯ ಪಕ್ಷಗಳು ಒಟ್ಟಾಗಿ ಇಂದು ಆಡಳಿತ ನಡೆಸುವ ಪಕ್ಷವಾಗಿದೆ ಎಂದು ಟೀಕಿಸಿದ ರೈ, ತುರ್ತುಪರಿಸ್ಥಿತಿಯಿಂದ ಬಡವರಿಗೆ ಅನ್ಯಾಯವಾಗಿಲ್ಲ. ದುರ್ಬಲ ವರ್ಗದವರು ಜೈಲಿಗೆ ಹೋಗಿಲ್ಲ. ಅಂದು ಬಡಜನರ ಪರ ಕಾನೂನು ರೂಪಿಸಲಾಗಿತ್ತು. ಇಂದು ಬಿಜೆಪಿಗೆ ಭೂಮಸೂದೆ ಕುರಿತು ಮಾತನಾಡುವ ಯೋಗ್ಯತೆಯೂ ಇಲ್ಲ ಎಂದು ಹೇಳಿದರು. ಇಂದಿರಾಗಾಂಧಿ ಅವರ ಯೋಜನೆಗಳಿಂದ ಲಾಭಪಡೆದುಕೊಂಡವರೇ ಅವರ ವಿರುದ್ದ ಬೊಬ್ಬೆಹಾಕುತ್ತಿದ್ದಾರೆ. ದೇಶದ ಏಕತೆ ಹಾಗೂ ಸಾರ್ವಭೌಮತೆಯನ್ನು ಉಳಿಸುವ ನಿಟ್ಟಿನಲ್ಲಿ ಇಂದಿರಾಗಾಂಧಿಯವರ ಸಾಧನೆ, ಕೊಡುಗೆಗಳು ಸದಾ ಸ್ಮರಣೀಯ ಎಂದರು.
ಜಿ.ಪಂ.ಸದಸ್ಯರಾದ ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಮಂಜುಳಾ ಮಾಧವ ಮಾವೆ, ಎಂ.ಎಸ್.ಮಹಮ್ಮದ್, ಗೇರು ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಬಿ.ಎಚ್.ಖಾದರ್, ತಾ.ಪಂ.ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಎಪಿಎಂಸಿ ಮಾಜಿ ಅಧ್ಯಕ್ಷ ಪದ್ಮನಾಭ ರೈ ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ ವೇದಿಕೆಯಲ್ಲಿದ್ದರು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಸ್ವಾಗತಿಸಿದರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ವಂದಿಸಿದರು. ಕೊಡಾಜೆ ಬಾಲಕೃಷ್ಣ ಆಳ್ವ ಕಾರ್ಯಕ್ರಮನಿರ್ವಹಿಸಿದರು. ಸಭೆಯಲ್ಲಿ ಪಕ್ಷದ ತಾಪಂ, ಪುರಸಭೆ ಸದಸ್ಯರು, ವಿವಿಧ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
Kshetra Samachara
31/10/2020 05:18 pm