ಉಡುಪಿ: ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಮಾರ್ವಾಡಿ ಹಟಾವೋ ಎಂಬ ಅಭಿಯಾನ ಆರಂಭಿಸಿದ್ದು ಇದರ ವಿರುದ್ಧ ಮಾರ್ವಾಡಿ ವರ್ತಕರು ಗರಂ ಆಗಿದ್ದಾರೆ. ಉಡುಪಿಯ ಕೆಲ ಕಿಡಿಗೇಡಿಗಳು ಫೇಸ್ ಬುಕ್ ನಲ್ಲಿ ಮಾರ್ವಾಡಿ ಹಠಾವೋ ಪೋಸ್ಟ್ ಹಾಕಿ ಮಾರ್ವಾಡಿಗಳ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದರು. ಇದರಿಂದ ಆಕ್ರೋಶಗೊಂಡಿರುವ ಮಾರ್ವಾಡಿಗಳು, ನಾವು ಎರಡು-ಮೂರು ದಶಕಗಳಿಂದ ಉಡುಪಿಯಲ್ಲಿ ವ್ಯಾಪಾರ-ವಹಿವಾಟು ಮಾಡುತ್ತಿದ್ದೇವೆ.ನ್ಯಾಯಯುತವಾಗಿ ಎಲ್ಲ ನಿಯಮ ಅನುಸರಿಸುತ್ತಾ ಸರಕಾರಕ್ಕೆ ತೆರಿಗೆ ಕಟ್ಟುತ್ತಾ ಬಂದಿದ್ದೇವೆ. ನಮ್ಮ ವಿರುದ್ಧ ಯಾರೋ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ.
ನಾವು ಭಾರತೀಯರು. ನಾವು ಪಾಕಿಸ್ತಾನ ಅಥವಾ ಬಾಂಗ್ಲಾದೇಶದಿಂದ ಬಂದಿಲ್ಲ. ಭಾರತೀಯರಾದ ನಾವು ಯಾವುದೇ ಮೂಲೆಯಲ್ಲೂ ಕೂಡ ವ್ಯಾಪಾರ ಮಾಡಬಹುದಾಗಿದೆ. ನಮ್ಮ ತಪ್ಪು ಇದ್ದರೆ ನಮ್ಮ ವಿರುದ್ಧ ಯಾರಾದರೂ ಕಾನೂನು ಹೋರಾಟ ಮಾಡುವುದಾದರೆ ಮಾಡಲಿ. ಆದರೆ, ಸುಮ್ಮನೆ ಅಪಪ್ರಚಾರ ಮಾಡಿದರೆ ಸಹಿಸುವುದಿಲ್ಲ ಎಂದು ಮಾರ್ವಾಡಿ ವರ್ತಕರು ಆಕ್ರೋಶ ವ್ಯಕ್ತಪಡಿಸುವುದರ ಜೊತೆಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.
Kshetra Samachara
27/10/2020 06:24 pm