ಮೂಡುಬಿದಿರೆ: ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ, ನಾವು ನಡೆದು ಬಂದ ಹಾದಿಯನ್ನು ಮತ್ತು ನಮ್ಮತನವನ್ನು ಮರೆಯಬಾರದು ಎಂದು ಆಳ್ವಾಸ್‌ನ ಹಿರಿಯ ವಿದ್ಯಾರ್ಥಿನಿ ಹಾಗೂ ಇವೈನ ಆಡಿಟ್ ಸೀನಿಯರ್ ಸಿಪಿಎ ಸವಿತಾ ಎಂ ಹೇಳಿದರು.
ಆಳ್ವಾಸ್ ಕಾಲೇಜಿನ ವೃತ್ತಿಪರ ವಾಣಿಜ್ಯ ವಿಭಾಗದ ವತಿಯಿಂದ ನಡೆದ 'ಚಾಣಕ್ಯ 2022' ಕಲೆ ಮತ್ತು ಸಾಹಿತ್ಯ ಸ್ಪರ್ಧಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಜೀವನದ ಪ್ರತಿಕ್ಷಣದಲ್ಲೂ, ಸಾಧನೆಯ ಹಾದಿಯಲ್ಲಿ ಸಾಗಲು ಶ್ರಮಿಸಬೇಕು. ಯಾರಾದರೂ ಜೀವನದಲ್ಲಿ ಎತ್ತರಕ್ಕೆ ಬೆಳೆಯುತ್ತಿದ್ದಾರೆ ಎಂದರೆ ಅಂಥವರನ್ನು ತಡೆಯುವವರು ಬಹಳ ಮಂದಿ ಇರುತ್ತಾರೆ. ಆ ಸಂದರ್ಭದಲ್ಲಿ ನಾವು ಗಟ್ಟಿಯಾಗಿ ನಿಲ್ಲಬೇಕು.
ನಮ್ಮ ಮುಂದಿನ ಗುರಿಯ ಬಗ್ಗೆ ಸ್ಪಷ್ಟ ಯೋಚನೆ ಇರಬೇಕು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಜೀವನದಲ್ಲಿ ಸೋಲು ಗೆಲುವು ಸಹಜ. ಸೋಲನ್ನು ಗೆದ್ದು ಮುನ್ನಡೆಯಬೇಕು ಮತ್ತು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಒಂದೊಳ್ಳೆ ಉದ್ದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಅದಕ್ಕೆ ತಕ್ಕಂತೆ ಕಲಿಕೆಯಲ್ಲಿ ತೊಡಗಬೇಕು. ಆಗ ಮಾತ್ರ ನಾವು ಉತ್ತಮ ಭವಿಷ್ಯವನ್ನು ಕಾಣಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭ ವೃತ್ತಿಪರ ವಾಣಿಜ್ಯ ವಿಭಾಗದ ಸಂಯೋಜಕ ಅಶೋಕ್ ಕೆ.ಜಿ ಉಪಸ್ಥಿತರಿದ್ದರು. ಸಿಪಿಎ ಸವಿತಾ ಎಂ. ಅವರು ರೂ. 70 ಲಕ್ಷದ ವಾರ್ಷಿಕ ವೇತನದೊಂದಿಗೆ, ಅಮೇರಿಕದ ಇವೈ ಕಂಪೆನಿಯಲ್ಲಿ ಉದ್ಯೋಗ ನಿರ್ವಹಿಸಲು ತೆರಳುತ್ತಿರುವ ಹಿನ್ನೆಲೆ ಅವರಿಗೆ ಈ ಕಾರ್ಯಕ್ರಮದಲ್ಲಿ ಶುಭಹಾರೈಸಲಾಯಿತು.
ವಿದ್ಯಾರ್ಥಿನಿ ವೈಷ್ಣವಿ ಸ್ವಾಗತಿಸಿ, ಶ್ರೀಲಕ್ಷ್ಮೀ ವಂದಿಸಿದರು. ವಿದ್ಯಾರ್ಥಿಗಳಾದ ನಿಶಾಲ್ ಡಿ'ಸಿಲ್ವಾ ಹಾಗೂ ಮಧುಸೂಧನ್ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. 'ಚಾಣಕ್ಯ 2022' ಅಂಗವಾಗಿ ವಿದ್ಯಾರ್ಥಿಗಳಿಗೆ ಮೆಹೆಂದಿ ಸ್ಪರ್ಧೆ, ಲೇಖನ ಬರಹ, ರಂಗೋಲಿ, ಭರತನಾಟ್ಯ, ಚಿತ್ರಕಲೆ, ಜಾನಪದ ಹಾಡು, ಪೆನ್ಸಿಲ್ ಸ್ಕೆಚ್, ಕಸದಿಂದ ರಸ ಹೀಗೆ ಹತ್ತಕ್ಕೂ ಅಧಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧಾ ವಿಜೇತರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.
Kshetra Samachara
25/08/2022 09:08 pm