ಬಂಟ್ವಾಳ: ಗುರುವಾರ ಸಂಜೆ ಬಂಟ್ವಾಳ ಪರಿಸರದಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಇದರಿಂದ ಹಲವೆಡೆ ತೊಂದರೆಯಾಯಿತು.
ಬಿ.ಸಿ.ರೋಡ್ ಪುಂಜಾಲಕಟ್ಟೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯ ಜಕ್ರಿಬೆಟ್ಟು ಮನ್ನಾಪು ಎಂಬಲ್ಲಿ ರಸ್ತೆಯ ಪಕ್ಕದಲ್ಲೇ ಇರುವ ಮನೆಯ ಅಂಗಳದಲ್ಲಿ ನೀರು ತುಂಬಿ ಒಣಗಿಸಲು ಇಟ್ಟ ಅಡಕೆ ಹಾಳಾದವು. ಹೆದ್ದಾರಿ ಕಾಮಗಾರಿ ಸಂದರ್ಭ ಮಣ್ಣ ರಾಶಿಯನ್ನು ಪಕ್ಕಕ್ಕೆ ಹಾಕಿದ ಪರಿಣಾಮ, ನೀರು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೆ ಅಂಗಣದಲ್ಲಿ ನೀರು ತುಂಬಿರುತ್ತದೆ ಎಂದು ಮನೆಯವರಾದ ಬಬಿತಾ ಎಂಬವರು ದೂರಿದ್ದಾರೆ.
ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟರ್ಸ್ ನಿವಾಸಿ ಹರೀಶ ಶೆಟ್ಟಿ ಎಂಬವರ ಕಾಂಕ್ರೀಟು ಮನೆ ಮೇಲೆ ಗುರುವಾರ ಸಂಜೆ ಗಾಳಿ ಮಳೆಗೆ ತೆಂಗಿನ ಮರ ಉರುಳಿ ಬಿದ್ದು ಗೋಡೆಗೆ ಹಾನಿಯಾಗಿದೆ. ಲೊರೆಟ್ಟೋ ಅಗ್ರಾರ್ ಜಕ್ರಿಬೆಟ್ಟು ರಸ್ತೆ ಬದಿ ಸೂಕ್ತ ಚರಂಡಿ ಇಲ್ಲದ ಪರಿಣಾಮ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿರುವುದು ಕಂಡುಬಂತು.
ಅಂತೆಯೇ ಬಿ.ಸಿ.ರೋಡ್, ಮೇಲ್ಕಾರ್, ಕಲ್ಲಡ್ಕ ಸಹಿತ ಹಲವೆಡೆ ಕಾಮಗಾರಿ ನಡೆಯುತ್ತಿರುವ ರಸ್ತೆ ಪಕ್ಕದಲ್ಲಿ ಸರಿಯಾಗಿ ನೀರು ಹರಿಯಲು ವ್ಯವಸ್ಥೆಗಳಿಲ್ಲದೆ ಜನರು ಅಪಾಯಕಾರಿ ಸನ್ನಿವೇಶವನ್ನು ಎದುರಿಸಬೇಕಾಯಿತು.
Kshetra Samachara
24/03/2022 07:24 pm