ಹಳೆ ತಮಿಳು ಸಿನಿಮಾದ "ಚಿನ್ನ ಚಿನ್ನ ಆಸೈ" ಎಂಬ ಹಾಡು ಭಾರೀ ಫೇಮಸ್ ಆಗಿತ್ತು. ಅಂದರೆ ಸಣ್ಣ ಸಣ್ಣ ಆಸೆ ಅಂತ ಇದರ ಅರ್ಥ. ಆದರೆ, ಮಲ್ಪೆ ಬೀಚಲ್ಲಿ ಜನರು ಚಿನ್ನ(ಬಂಗಾರ) ದ ಆಸೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಚಿನ್ನ ಯಾರಿಗಾದರೂ ಸಿಕ್ಕಿತಾ ಎಂಬುದು ಇಲ್ಲಿ ನಗಣ್ಯ. ಆದರೆ, ಇದರ ಹಿನ್ನೆಲೆಯಂತೂ ಕುತೂಹಲಕಾರಿಯಾಗಿದೆ!
ಇಲ್ಲಿನ ದೃಶ್ಯಾವಳಿ ನೋಡಿ...ಇದು ಉಡುಪಿಯ ಪ್ರಖ್ಯಾತ ಮಲ್ಪೆ ಬೀಚ್ . ಕಳೆದ ಕೆಲದಿನಗಳಿಂದ ಇಡೀ ದಿನ ಈ ದೃಶ್ಯ ಕಣ್ಣಿಗೆ ಬೀಳುತ್ತಿದೆ. ಇವರೆಲ್ಲ ಮರಳಲ್ಲಿ ಚಿನ್ನ ಹುಡುಕುತ್ತಿದ್ದಾರೆ! ಹೌದು... ಎರಡು ವಾರಗಳ ಸತತ ಗಾಳಿ- ಮಳೆಗೆ ಕಡಲು ಪ್ರಕ್ಷುಬ್ಧಗೊಂಡಿತ್ತು.
ಈ ಅವಧಿಯಲ್ಲಿ ಸಮುದ್ರ ತನ್ನ ಒಡಲಲ್ಲಿದ್ದ ತ್ಯಾಜ್ಯವನ್ನೆಲ್ಲ ಹೊರಕ್ಕೆಸೆದಿದೆ. ಹೀಗೆ ಕಡಲು ಹೊರ ಚೆಲ್ಲಿದ ತ್ಯಾಜ್ಯದಲ್ಲಿ ಅಮೂಲ್ಯ ವಸ್ತುಗಳು ಇವೆಯೇ ಎಂಬ ಹುಡುಕಾಟ ಇವರದ್ದು. ಅದರಲ್ಲೂ ಚಿನ್ನದ ಉಂಗುರ ಮತ್ತು ಒಡವೆಗಳಿಗಾಗಿ ಇವರು ಹುಡುಕುತ್ತಾರೆ. ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಶೋಧ ನಡೆಸುತ್ತಾರೆ. ಈ ವರ್ಷ ಅಂತಲ್ಲ, ಪ್ರತೀ ಮಳೆಗಾಲಕ್ಕೂ ಹೆಚ್ಚಾಗಿ ಸ್ಥಳೀಯರು ಬೀಚಲ್ಲಿ ಈ ರೀತಿ ಚಿನ್ನ ಹುಡುಕುತ್ತಾರೆ.
ಕಡಲು ತನ್ನ ಒಡಲಲ್ಲಿ ಏನನ್ನೂ ಇಟ್ಟುಕೊಳ್ಳುವುದಿಲ್ಲ. ಈ ಹಿಂದೆ ಪ್ರವಾಸಿಗರ ಮೈಮೇಲಿನಿಂದ ಬಿದ್ದಿರಬಹುದಾದ ಚಿನ್ನಾಭರಣ ಮರಳಲ್ಲಿಇರುತ್ತೆ. ಇನ್ನು, ನೀರುಪಾಲಾದ ವ್ಯಕ್ತಿಗಳ ಅಮೂಲ್ಯ ಒಡವೆ, ಹಣ ...ಮರಳಲ್ಲಿ ಸಿಕ್ಕಿದ ಉದಾಹರಣೆ ಸಾಕಷ್ಟಿವೆ. ಹೀಗಾಗಿ ಮರಳಲ್ಲಿ ಕೋಲು ಹಿಡಿದು, ಕೆದಕಿ ಹುಡುಕುತ್ತಾರೆ. ಸಿಕ್ಕರೆ ಬಂಪರ್ , ಇಲ್ಲಾಂದ್ರೆ ಟೈಮ್ ವೇಸ್ಟ್ ಅಷ್ಟೆ.
ಸದ್ಯ ಬೀಚ್ ನಲ್ಲಿ ನೀರಿಗಿಳಿಯುವಂತಿಲ್ಲ. ಮಳೆ ಅಬ್ಬರ ತಣ್ಣಗಾಗುವ ತನಕ ಕಡಲಿಗಿಳಿಯದಂತೆ ನೆಟ್ ಅಳವಡಿಸಲಾಗಿದೆ. ಇನ್ನು ನೀವು ಚಿನ್ನದ ಆಸೆಗಾಗಿ ಇಲ್ಲಿಗೆ ಬರಬೇಡಿ, ಯಾಕೆಂದರೆ ಚಿನ್ನ ಸಿಗುವ ಗ್ಯಾರಂಟಿಯನ್ನು ನಾವು ನಿಮಗೆ ಕೊಡಲ್ಲ!
ವಿಶೇಷ ವರದಿ: ರಹೀಂ ಉಜಿರೆ
PublicNext
18/07/2022 04:13 pm