ಕಾಪು: ಈ ಭಾಗದಲ್ಲಿ ತಂದೆಯ ಮೂರ್ತಿ ಮಾಡಿ ಪೂಜಿಸುವವರಿದ್ದಾರೆ. ಇನ್ನೊಂದೆಡೆ ತಾಯಿಯ ಸ್ಮರಣಾರ್ಥ ಪುತ್ಥಳಿ ಮಾಡಿದ ಮಕ್ಕಳಿದ್ದಾರೆ. ಇದು ಸ್ವಲ್ಪ ಭಿನ್ನ. ಇಲ್ಲಿ ಪ್ರೀತಿಯ ಅಜ್ಜನ ಮೂರ್ತಿ ರಚಿಸಿ ಪ್ರತಿಷ್ಟಾಪಿಸಿದ್ದಾರೆ ಮೊಮ್ಮಕ್ಕಳು....
ಅಷ್ಟಕ್ಕೂ ಈ ಪುಟಾಣಿಗಳೇನೂ ನುರಿತ ಕಲಾವಿದರೇನಲ್ಲ. ಅಜ್ಜ ಚಿನ್ನ ಆರ್. ಅಂಚನ್ ನಿಧನದ ನಂತರ ಅಜ್ಜನ ನೆನಪಿಗೆ ಏನಾದರೂ ಮಾಡಬೇಕೆಂದು ಮೊಮ್ಮಕ್ಕಳು ಒಟ್ಟಾಗಿ ತೀರ್ಮಾನಿಸಿದರು. ಕೊನೆಗೂ ನಿರ್ಮಾಣವಾಯಿತು ಅಜ್ಜನ ಸುಂದರಮೂರ್ತಿ. ಚಿನ್ನ ಆರ್. ಅಂಚನ್, ಪ್ರಗತಿಪರ ಕೃಷಿಕರು. ಇವರದ್ದು ತುಂಬು ಕುಟುಂಬ. ಉಡುಪಿ ಜಿಲ್ಲೆಯ ಮಟ್ಟು ಗ್ರಾಮದವರು. ಮಟ್ಟುಗುಳ್ಳವನ್ನು ಹೊರ ಜಿಲ್ಲೆಯಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಚಿನ್ನ ಅಂಚನ್ ದಂಪತಿಗೆ ಎಂಟು ಜನ ಮಕ್ಕಳಲ್ಲಿ 7 ಗಂಡು 1ಹೆಣ್ಣು. ಜೊತೆಗೆ ಸೊಸೆಯಂದಿರು, ಮೊಮ್ಮಕ್ಕಳು ಮರಿಮಕ್ಕಳು ಅಳಿಯಂದಿರು ಸೇರಿ ದೊಡ್ಡ ಸಂಸಾರ. ಆದಿತ್ಯವಾರ ಅಥವಾ ರಜಾದಿನಗಳಲ್ಲಿ ಅಜ್ಜ ಮನೆ ಸೇರಿದರೆ ಕುಟುಂಬ ಸದಸ್ಯರಿಗೆ ಹಬ್ಬ.
82 ವರ್ಷದ ಚಿನ್ನ ಅಂಚನ್ ಅವರು ಇತ್ತೀಚಿಗೆ ನಿಧನ ಹೊಂದಿದರು. ಅಜ್ಜನನ್ನು ಕಳೆದುಕೊಂಡ ಮೊಮ್ಮಕ್ಕಳು ಅಜ್ಜ ಸದಾ ತಮ್ಮ ಜೊತೆ ಇರಬೇಕೆಂಬುದು ಆಸೆ ಪಟ್ಟರು.ಯೂಟ್ಯೂಬ್ ನಲ್ಲಿ ಮೂರ್ತಿ ತಯಾರಿ ಬಗ್ಗೆ ಮಾಹಿತಿ ಕಲೆಹಾಕಿದ ಮರಿಮಕ್ಕಳು, ಮನೆ ಮಂದಿ ಸೇರಿ ಅಜ್ಜನ ಸುಂದರಮೂರ್ತಿನಿರ್ಮಾಣ ಮಾಡಿದ್ದಾರೆ. ಈ ಮೂರ್ತಿಯನ್ನು ಮನೆಯ ಅಂಗಳದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಈ ಮೂಲಕ ಅಜ್ಜ ತಮ್ಮ ಜೊತೆಗಿಲ್ಲ ಎಂಬ ನೋವನ್ನು ಈ ಮೊಮ್ಮಕ್ಕಳು ದೂರ ಮಾಡಿದ್ದಾರೆ.
Kshetra Samachara
24/05/2022 05:35 pm