ಬೆಳ್ಳಾರೆ: ಶಾಂತಿಯುತ ಗಣೇಶೋತ್ಸವ ಆಚರಣೆಗಾಗಿ ಬೆಳ್ಳಾರೆ ಪೋಲಿಸ್ ಠಾಣಾ ವತಿಯಿಂದ ಬೆಳ್ಳಾರೆ ಅಂಬೇಡ್ಕರ್ ಭವನದಲ್ಲಿ ಪುತ್ತೂರು ಡಿವೈಎಸ್ಪಿ ಡಾ.ವೀರಯ್ಯ ಹೀರೆಮಠ್ ನೇತೃತ್ವದಲ್ಲಿ ಶಾಂತಿ ಸಭೆ ಇಂದು ನಡೆಯಿತು. ಸಾರ್ವಜನಿಕರನ್ನು ಒಟ್ಟುಗೂಡಿಸಿ ಶಾಂತಿ ಸಭೆ ನಡೆಸಲಾಯಿತು.
ಈ ವೇಳೆ ಡಿವೈಎಸ್ಪಿ ಡಾ.ವೀರಯ್ಯ ಹೀರೆಮಠ್ ಮಾತನಾಡಿ, ಇತ್ತೀಚೆಗೆ ನಡೆದ ಅಹಿತಕರ ಘಟನೆಯಿಂದ ಬೆಳ್ಳಾರೆ ಇಡೀ ದೇಶಾದ್ಯಂತ ಸುದ್ದಿಯಾಗಿತ್ತು. ಮುಂದಿನ ದಿನಗಳಲ್ಲಿ ಇಂತಹ ಘಟನೆಗೆ ಅನುವು ಮಾಡದೇ ಶಾಂತಿ ಕಾಪಾಡಿಕೊಂಡು ಎಲ್ಲರೂ ಸಹಕರಿಸಿ ಎಂದರು. ಗೌರಿ ಗಣೇಶ ಹಬ್ಬ ಸಮೀಪಿಸುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡಿ ಹಬ್ಬ ಆಚರಿಸಿ. ಇಲಾಖೆಯೊಂದಿಗೆ ಸಹಕರಿಸಿ. ಯಾರಿಗೂ ತೊಂದರೆಯಾಗದಂತೆ ಅಹಿತಕರ ಘಟನೆಗೆ ಎಡೆಮಾಡದೇ ಈ ಹಬ್ಬವನ್ನು ಆಚರಿಸಿ ಎಂದರು. ಇಲಾಖೆ ಹೊರಡಿಸಿದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ ನಮ್ಮೊಂದಿಗೆ ಸಹಕರಿಸಿ. ಪೊಲೀಸ್ ಇಲಾಖೆ ಸದಾ ನಿಮ್ಮೊಂದಿಗೆ ಇದೆ ಎಂದರು.
ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಚಂದ್ರ ಜೋಗಿ ಮಾತನಾಡಿ ,ಯಾವುದೇ ಸಂಘಟನೆಯಾಗಿರಲಿ ,ಧರ್ಮವಾಗಿರಲಿ ನಾವು ಒಂದುಗೂಡಿಸುವ ಕೆಲಸ ಮಾಡಬೇಕೇ ಹೊರತು ಶಾಂತಿ ಕೆಡಿಸುವಂತಹ ಕೆಲಸಕ್ಕೆ ಹೋಗಬಾರದು. ಸಮಾಜದಲ್ಲಿ ಶಾಂತಿ ಕಾಪಾಡುವತ್ತ ಎಲ್ಲರೂ ಸಹಕರಿಸಬೇಕು ಎಂದರು.
ಸಭೆಯಲ್ಲಿ ಶರೀಫ್ ಭಾರತ್ , ವಿಶ್ವನಾಥ ರೈ ಕಳಂಜ , ಆನಂದ ಬೆಳ್ಳಾರೆ , ಜಯರಾಮ ಉಮಿಕ್ಕಳ , ಸುಬ್ರಾಯ ಗೌಡ ಪಾಲ್ತಾಡಿ, ಗಫೂರ್ ಸಾಹೇಬ್ ಕಲ್ಮಡ್ಕ, ಪ್ರೇಮಚಂದ್ರ ಬೆಳ್ಳಾರೆ ಮೊದಲಾದವರು ಮಾತನಾಡಿದರು. ಸಭೆಯಲ್ಲಿ ಊರ ಧಾರ್ಮಿಕ ಮುಖಂಡರು , ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಬೆಳ್ಳಾರೆ ಠಾಣೆಯ ಎಸ್ಐ ಸುಹಾಸ್ , ಕ್ರೈಂ ಎಸ್ಐ ಆನಂದ ಉಪಸ್ಥಿತರಿದ್ದರು. ಹೆಡ್ ಕಾನ್ಸ್ಟೇಬಲ್ ಕೃಷ್ಣಪ್ಪ ಸೇರಿದಂತೆ ಠಾಣಾ ಸಿಬ್ಬಂದಿ ವರ್ಗ ಸಭೆಯಲ್ಲಿ ಸಹಕರಿಸಿದರು.
Kshetra Samachara
25/08/2022 09:08 pm