ಉಡುಪಿ : ಈಗಾಗಲೇ ಸಂಪೂರ್ಣ ಗೊಂಡಿರುವ 15 ಲಕ್ಷಕ್ಕೂ ಮಿಕ್ಕಿದ ಸಾರ್ವಜನಿಕ ಕಾಮಗಾರಿಗೆ ಉಡುಪಿ ನಗರಸಭೆಯು ಮತ್ತೊಮ್ಮೆ ಕರೆದಿರುವ ಟೆಂಡರ್ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿ, ಈ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.
ಈ ಬಗ್ಗೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರಿಗೆ ಮನವಿ ಸಲ್ಲಿಸಿದ್ದು, ನಗರಸಭೆಯು 17 ಕಾಮಗಾರಿಗಳನ್ನು ನಿರ್ವಹಿಸಲು ಟೆಂಡರ್ ಪ್ರಕಟಣೆ ನೀಡಿರುತ್ತದೆ. ಆದರೆ ಈ ಕಾಮಗಾರಿಗಳ ಪೈಕಿ ಕುಂಜಿಬೆಟ್ಟು ಶಾರದ ನಗರ ರಸ್ತೆಯಿಂದ ಸೇತುವೆ ತನಕ ರೂ. 15 ಲಕ್ಷ ಮೊತ್ತದ ರಸ್ತೆ ಡಾಮಾರೀಕರಣ ಕಾಮಗಾರಿಯನ್ನು ಈಗಾಗಲೇ ನಿರ್ವಹಿಸಲಾಗಿದೆ.
ಈ ಕಾಮಗಾರಿ ಮಾತ್ರವಲ್ಲದೇ ಇನ್ನೂ ಅನೇಕ ಕಾಮಗಾರಿಗಳನ್ನು ಸರಕಾರದ ನಿಯಮಗಳು ಮತ್ತು ಸುತ್ತೋಲೆಗಳನ್ನು ಗಾಳಿಗೆ ತೂರಿ ಈಗಾಗಲೇ ಪೋರ್ಣಗೊಳಿಸಿದೆ.
ಈ ಕಾಮಗಾರಿಯಲ್ಲಿ ಇನ್ನೇನು ಕೆಲಸಗಳು ಬಾಕಿ ಇಲ್ಲದಿದ್ದರೂ ಈಗಾಗಲೇ ನಿರ್ವಹಿಸಿರುವ ಕಾಮಗಾರಿಗೆ ಟೆಂಡರ್ ಆಹ್ವಾನಿಸುವುದು ಕಾನೂನುಬಾಹಿರ. ಹಾಗೂ ಈ ಟೆಂಡರ್ ಪ್ರಕಟಣೆಗಳನ್ನು ನೀಡುವಲ್ಲಿ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ.ಉಡುಪಿ ನಗರಸಭೆಯ ಪೌರಾಯುಕ್ತರು ಹಾಗೂ ಅಧಿಕಾರಿಗಳು ನಗರಸಭೆಯ ಆಡಳಿತ ಪಕ್ಷದ ಸದಸ್ಯರೊಂದಿಗೆ ಶಾಮಿಲಾಗಿ ಈ ಬೃಹತ್ ಅವ್ಯವಹಾರವನ್ನು ನಡೆಸಿರುವುದು ಕಂಡು ಬರುತ್ತದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಈ ಟೆಂಡರು ಪ್ರಕಟಣೆಗಳಲ್ಲಿ ನೀಡಿರುವ ಪ್ರತಿಯೊಂದು ಕಾಮಗಾರಿಯನ್ನು ಪರಿಶೀಲಿಸಿ ಈಗಾಗಲೇ ನಿರ್ವಹಿಸಿರುವ ಕಾಮಗಾರಿಗಳನ್ನು ಕೈಬಿಡುವುದು ತೀರಾ ಅವಶ್ಯಕವಾಗಿರುತ್ತದೆ. ಆದ್ದರಿಂದ, ಈ ಟೆಂಡರು ಪ್ರಕಟಣೆಗಳಿಗೆ ಸಂಬಂಧಿಸಿದ ಮುಂದಿನ ಟೆಂಡರು ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡಿ, ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಲಾಗಿದೆ.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ರಮೇಶ್ ಕಾಂಚನ್, ದೂರುದಾರರಾದ ಯತೀಶ್ ಕರ್ಕೇರಾ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ನಗರಸಭೆಯ ಮಾಜಿ ಉಪದ್ಯಕ್ಷ ಕುಶಾಲ್ ಶೆಟ್ಟಿ,ಪ್ರಚಾರಸಮಿತಿಯ ಪ್ರಶಾಂತ ಪೂಜಾರಿ, ಶಶಿರಾಜ್ ಕುಂದರ್, ಅಮೃತ್ ಶೆಣೈ, ಜ್ಯೋತಿ ಹೆಬ್ಬಾರ್ ಉಪಸ್ಥಿತರಿದ್ದರು.
Kshetra Samachara
11/02/2022 05:04 pm