ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಹಿತರಕ್ಷಣೆಗೆ ಗ್ಲೌಸ್, ಮಾಸ್ಕ್ ಹಾಗೂ ಸಮವಸ್ತ್ರ ಕಡ್ಡಾಯವಾಗಿ ಒದಗಿಸುವಂತೆ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಪಂ ನೇತ್ರಾವತಿ ಸಭಾಂಗಣದಲ್ಲಿ ನಡೆದ ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿರುವ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಎಂ.ಎಸ್. (ಮ್ಯಾನ್ಯುಯೆಲ್ ಸ್ಕ್ವಾವೆಂಜಿಂಗ್) ಕಾಯ್ದೆ-2013ರ ಬಗ್ಗೆ ತರಬೇತಿ ಹಾಗೂ ಪೌರಕಾರ್ಮಿಕರ ಸಮಸ್ಯೆ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಫಾಯಿ ಕರ್ಮಚಾರಿಗಳು ಎದುರಿಸುತ್ತಿರುವ ಸಮಸ್ಯೆ, ಕುಂದು-ಕೊರತೆ ಗಣನೆಗೆ ತೆಗೆದುಕೊಂಡು ಸಮಾಜದಲ್ಲಿ ಅವರಿಗೆ ಸ್ಥಾನಮಾನ, ಸೌಲಭ್ಯ, ಅವಕಾಶ ಪಡೆಯುವಂತೆ ನೋಡಿಕೊಳ್ಳಬೇಕು. ಎಂ.ಎಸ್.ಕಾಯ್ದೆ-2013ರನ್ವಯ ಮಲ ಹೊರುವುದು ಅನಿಷ್ಟ ಪದ್ಧತಿಯಾಗಿದ್ದು, ಅದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಮಲ ಹೊರುವ ಕೆಲಸಕ್ಕೆ ಯಾರನ್ನೇ ನೇಮಕ ಮಾಡಿಕೊಂಡಲ್ಲಿ ಕಾನೂನು ರೀತಿ 1ರಿಂದ 5 ವರ್ಷದ ವರೆಗೆ ಜೈಲು ಹಾಗೂ ದಂಡದ ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗ್ರಾಮೀಣ, ನಗರ ಪ್ರದೇಶಗಳಲ್ಲಿ ಮಲ ಗುಂಡಿ ಸ್ವಚ್ಛಗೊಳಿಸಲು ಯಂತ್ರೋಪಕರಣಗಳಿವೆ. ಸಾರ್ವಜನಿಕರು ಸ್ಥಳೀಯ ಸಂಸ್ಥೆ ಸಂಪರ್ಕಿಸಿ ಯಂತ್ರ ಮೂಲಕ ಮಲಗುಂಡಿ ಸ್ವಚ್ಛ ಮಾಡಿಸಬೇಕು. ಸರಕಾರದ ಸೌಲಭ್ಯ ಪಡೆಯುವಲ್ಲಿ ಕಾರ್ಮಿಕರು ಜಾಗೃತರಾಗಬೇಕು. ಈ ಬಗ್ಗೆ ತರಬೇತಿ ಕಾರ್ಯಾಗಾರ ಆಯೋಜಿಸಿ ಮಾಹಿತಿ ಒದಗಿಸಬೇಕು. ನಗರ ಸ್ಥಳೀಯ ಸಂಸ್ಥೆಗಳು, ಗ್ರಾಪಂ, ಆಸ್ಪತ್ರೆ, ಮಾಲ್‍ಗಳು ಹಾಗೂ ಇತರೆಡೆ ಕೆಲಸ ಮಾಡುವ ಸಫಾಯಿ ಕರ್ಮಚಾರಿಗಳ ಸಂಖ್ಯೆ ನಿಖರವಾಗಿ ಇಲ್ಲದಿರುವುದರಿಂದ ಸರ್ವೇ ಕಾರ್ಯವನ್ನು ರಾಷ್ಟ್ರೀಯ ಕಾನೂನು ವಿವಿ ಮುಖಾಂತರ ನಡೆಸಲಾಗುತ್ತಿದೆ ಎಂದರು.
Kshetra Samachara
29/10/2021 10:54 pm