ಮಂಗಳೂರು: ಮಂಗಳೂರು ನಗರ ಪೊಲೀಸ್ ಇಲಾಖೆಯಿಂದ ಆಯೋಜನೆಗೊಂಡಿರುವ ಪೊಲೀಸ್ ಹುದ್ದೆ ಆಕಾಂಕ್ಷಿಗಳ ತರಬೇತಿ ಕಾರ್ಯಾಗಾರವು ನಗರದ ಕೊಡಿಯಾಲಬೈಲ್ ನಲ್ಲಿರುವ ಗೋನ್ಝಾಗಾ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಮಂಗಳೂರು ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಜವಾಬ್ದಾರಿ ನಿಭಾಯಿಸೋದು ಸುಲಭವಾದ ಮಾತಲ್ಲ. ಕ್ಲಿಷ್ಟವೂ, ಸವಾಲಿನ ಕೆಲಸವೂ ಹೌದು. ಆದರೆ ಪೊಲೀಸ್ ಇಲಾಖೆ ದೊಡ್ಡ ಪರಿವಾರ. ಆದ್ದರಿಂದ ಪೊಲೀಸ್ ಇಲಾಖೆಯ ತರಬೇತಿಗೆ ಆಯ್ಕೆಯಾಗಿರುವ ತಮಗೆ ಇದೊಂದು ಉತ್ತಮ ಅವಕಾಶ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಾ ಕಡೆಗಳಲ್ಲಿ ಉದ್ಯೋಗದ ಕೊರತೆಯೂ ಕಂಡು ಬರುತ್ತಿದೆ. ಆದ್ದರಿಂದ ಈಗ ತಮಗೆ ದೊರೆತಿರುವ ಅವಕಾಶವನ್ನು ಕಠಿಣ ಪರಿಶ್ರಮದಿಂದ ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತರಬೇತಿ ಕಾರ್ಯಾಗಾರದ ಅಭ್ಯರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಒಂದು ತಿಂಗಳ ತರಬೇತಿ ಕಾರ್ಯಾಗಾರವು ಪೂರ್ಣಪ್ರಮಾಣದ ಇಲಾಖೆಯ ತರಬೇತಿಯಲ್ಲ. ಪೊಲೀಸ್ ಇಲಾಖೆಯಲ್ಲಿ ಜವಾಬ್ದಾರಿಯಿಂದ ನಿಭಾಯಿಸಲು ಬೇಕಾದ ವೈಯುಕ್ತಿಕ ಶ್ರಮದ ಅಗತ್ಯ ಎಲ್ಲಾ ತರಬೇತಿ ಕಾರ್ಯಾಗಾರದ ಅಭ್ಯರ್ಥಿಗಳಲ್ಲಿ ಅವಶ್ಯವಾಗಿ ಬೇಕಾಗುತ್ತದೆ ಎಂದು ದೇವಜ್ಯೋತಿ ರೇ ಹೇಳಿದರು.
ಈ ಸಂದರ್ಭ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್., ಡಿಸಿಪಿ ಹರಿರಾಂ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
21/08/2021 11:58 am