ಬೈಂದೂರು: ತಡರಾತ್ರಿ ಕುಂದಾಪುರ ಕಡೆಯಿಂದ ಬೈಂದೂರಿನತ್ತ ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸಮುದ್ರಪಾಲಾದ ಪರಿಣಾಮ ಕಾರಿನೊಳಗಿದ್ದ ನಾಲ್ವರ ಪೈಕಿ ಚಾಲಕ ಸಾವನ್ನಪ್ಪಿದ್ದು, ಇನ್ನೋರ್ವ ನಾಪತ್ತೆಯಾಗಿದ್ದು, ಇಬ್ಬರು ಗಾಯಾಳುಗಳಾಗಿ ಆಸ್ಪತ್ರೆಗೆ ಸೇರಿದ ದಾರುಣ ಘಟನೆ ಗಂಗೊಳ್ಳಿ ಠಾಣಾ ವ್ಯಾಪ್ತಿಯ ಪ್ರಸಿದ್ದ ಮರವಂತೆ ಬೀಚ್ ನ ರಾಷ್ಟ್ರೀಯ ಹೆದ್ದಾರಿ 66ರ ಬಳಿ ನಡೆದಿದೆ.
ಬೀಜಾಡಿಯ ಗೋಳಿಬೆಟ್ಟು ನಿವಾಸಿ ವಿಲಾಸ್ ಮಾರ್ಬಲ್ ನ ಮಾಲಕ ರಮೇಶ್ ಆಚಾರ್ ನೇರಂಬಳ್ಳಿಯವರ ಪುತ್ರ ವಿರಾಜ್ ಆಚಾರ್ಯ(28) ಸಾವನ್ನಪ್ಪಿದ ದುರ್ದೈವಿ, ಸಹೋದರ ಸಂಬಂಧಿಗಳಾದ ರೋಶನ್, ಸಂದೇಶ್, ಕಾರ್ತಿಕ್ ಪೈಕಿ ರೋಶನ್ ಎಂಬವರು ನಾಪತ್ತೆಯಾಗಿದ್ದು, ಸಮುದ್ರದಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಸಂದೇಶ್ ಹಾಗೂ ಕಾರ್ತಿಕ್ ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆಯ ಹಿನ್ನೆಲೆ:
ಶನಿವಾರ ತಡರಾತ್ರಿ ಸುಮಾರು 12:30ರಿಂದ 1 ಗಂಟೆಯ ವೇಳೆಗೆ ಕುಂದಾಪುರದಿಂದ ಕೆಂಪು ಬಣ್ಣದ ಸ್ವಿಫ್ಟ್ ಕಾರಿನಲ್ಲಿ ವಿರಾಜ್ ಹಾಗೂ ಅವರ ಸಹೋದರ ಸಂಬಂಧಿಗಳು ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಪ್ರಯಾಣಿಸುತ್ತಿದ್ದರು. ವಿರಾಜ್ ಸ್ವತಃ ಕಾರನ್ನು ಚಾಲನೆ ಮಾಡುತ್ತಿದ್ದರು ಎನ್ನಲಾಗಿದೆ.
ರಕ್ಷಣೆಯ ಪ್ರಯತ್ನ ವಿಫಲ: ಸ್ಥಳೀಯ ಮುಳುಗುತಜ್ಞ ದಿನೇಶ್ ಖಾರ್ವಿ, ಇಬ್ರಾಹಿಂ ಗಂಗೊಳ್ಳಿ, ನಾಗರಾಜ್ ಪಟಗಾರ್, ಕಿಶನ್ ಮರವಂತೆ, ದಿನೇಶ್ ಮರವಂತೆ, ಲಿಪ್ಟನ್ ತ್ರಾಸಿ, ಮತ್ತವರ ತಂಡ ಸ್ಥಳೀಯರ ಯುವಕರ ಸಹಕಾರವನ್ನು ಪಡೆದುಕೊಂಡು ಕಾರನ್ನು ಮೇಲೆತ್ತುವ ಪ್ರಯತ್ನ ಮಾಡಿದರಾದರೂ ಭಾರಿ ಮಳೆ ಹಾಗೂ ಇತರ ಕಾರಣದಿಂದ ಕೂಡಲೇ ಇದು ಸಾಧ್ಯವಾಗಲಿಲ್ಲ.
ಕುಂದಾಪುರದ ಡಿವೈಎಸ್‌ಪಿ ಶ್ರೀಕಾಂತ್ ಕೆ, ಸರ್ಕಲ್ ಇನ್ಸ್ ಪೆಕ್ಟರ್ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ ಠಾಣಾಧಿಕಾರಿ ವಿನಯ್ ಕುಮಾರ್, ಕುಂದಾಪುರ ಸಂಚಾರಿ ಠಾಣೆಯ ಠಾಣಾಧಿಕಾರಿ ಸುಧಾ ಪ್ರಭು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಘಟನಾ ಸ್ಥಳದಲ್ಲಿ ಭಾರೀ ಜನಸ್ತೋಮ ಸೇರಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ.
PublicNext
03/07/2022 12:52 pm