ಕುಂದಾಪುರ: ಪದವಿ ಪರೀಕ್ಷೆ ಮೌಲ್ಯಮಾಪನ, ಫಲಿತಾಂಶ, ಅಂಕಪಟ್ಟಿ ನೀಡಿಕೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಇವತ್ತು ವಿದ್ಯಾರ್ಥಿಗಳು ಬೀದಿಗಿಳಿದಿದ್ದಾರೆ.ಕುಂದಾಪುರದಲ್ಲಿ ಎಬಿವಿಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆದಿದ್ದು ಶೀಘ್ರ ಮಂಗಳೂರು ವಿಶ್ವವಿದ್ಯಾನಿಲಯ ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಆಗ್ರಹಿಸಿದೆ.
ಮಂಗಳೂರು ವಿಶ್ವವಿದ್ಯಾನಿಲಯದಿಂದ ಪದವಿ ತರಗತಿಗಳಿಗೆ ನಡೆದ ದ್ವಿತೀಯ ಮತ್ತು ಚತುರ್ಥ ಸೆಮಿಸ್ಟರ್ ಪರೀಕ್ಷೆಯ ಅಂಕಪಟ್ಟಿಗಳು ಪರೀಕ್ಷಾ ಫಲಿತಾಂಶ ಬಂದು ತಿಂಗಳಾದರೂ ವಿದ್ಯಾರ್ಥಿಗಳ ಕೈ ಸೇರಿಲ್ಲ. ಜೊತೆಗೆ ಕೆಲವು ವಿಭಾಗಗಳ ಫಲಿತಾಂಶಗಳೂ ಪ್ರಕಟವಾಗಿಲ್ಲ. ಇದರಿಂದ ಪ್ರತಿಷ್ಠಿತ ಕಂಪೆನಿಗಳಿಗೆ ಕ್ಯಾಂಪಸ್ ನಿಂದ ಆಯ್ಕೆಯಾದ ವಿದ್ಯಾರ್ಥಿಗಳು ಪ್ರಮುಖ ದಾಖಲೆಯಾಗಿ ಅಂಕಪಟ್ಟಿ ಸಲ್ಲಿಸಲಾಗುತ್ತಿಲ್ಲ.
ಹೀಗಾಗಿ ಅವರನ್ನು ಉದ್ಯೋಗದಿಂದ ಕೈ ಬಿಡಲಾಗುತ್ತಿದ್ದು, ಈಗಾಗಲೇ ಹಲವು ವಿದ್ಯಾರ್ಥಿಗಳು ಉದ್ಯೋಗದಿಂದ ವಂಚಿತರಾಗಿದ್ದಾರೆ. ಇನ್ನು ಆಗಸ್ಟ್ 3ರಂದು ಪ್ರಕಟವಾದ ಪದವಿ ತರಗತಿಗಳ ತೃತೀಯ ಹಾಗೂ ಐದನೇ ಸೆಮಿಸ್ಟರ್ ಫಲಿತಾಂಶಗಳಲ್ಲೂ ಹಲವಾರು ದೋಷಗಳಿದ್ದು, ವಿದ್ಯಾರ್ಥಿಗಳಲ್ಲಿ ಹಾಗೂ ಶಿಕ್ಷಕರಲ್ಲಿ ಗೊಂದಲ ಉಂಟಾಗಿದೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.
ವಿಶ್ವವಿದ್ಯಾನಿಲಯ ಈ ಬಗ್ಗೆ ಸ್ಪಷ್ಟಿಕರಣ ನೀಡಬೇಕು ಹಾಗೂ ವಿದ್ಯಾರ್ಥಿಗಳಿಗೆ ಆಗಸ್ಟ್ 11ರ ಒಳಗೆ ನ್ಯಾಯ ಒದಗಿಸದೇ ಇದ್ದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಬಿವಿಪಿ ಕುಂದಾಪುರ ತಾಲೂಕು ಸಂಚಾಲಕ ಜಯಸೂರ್ಯ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.
Kshetra Samachara
06/08/2022 04:40 pm