ವರದಿ: ರಹೀಂ ಉಜಿರೆ
ಉಡುಪಿ : ರಾಜ್ಯ ಸರ್ಕಾರ ಇಂದಿನಿಂದ ಜಾರಿಗೊಳಿಸುತ್ತಿರುವ ನೈಟ್ ಕರ್ಫ್ಯೂ, ಕರಾವಳಿ ಕಲಾವಿದರ ನಿದ್ದೆಗೆಡಿಸಿದೆ. ಎರಡು ವರ್ಷಗಳಿಂದ ಸರಿಯಾದ ಪ್ರದರ್ಶನ ಇಲ್ಲದೇ ನೋವುಂಡಿದ್ದ ಯಕ್ಷಗಾನ ಕಲಾವಿದರು, ಸದ್ಯ ಪ್ರದರ್ಶನ ರದ್ದಾಗುವ ಭೀತಿಯಲ್ಲಿದ್ದಾರೆ.ಇನ್ನು ದೈವದ ನರ್ತನ ಸೇವೆ, ನಾಗಮಂಡಲ, ಕಂಬಳ ಬ್ರಹ್ಮಕಳಶೋತ್ಸವಗಳ ಮೇಲೂ ಕರ್ಪ್ಯೂ ಕರಿಛಾಯೆ ಆವರಿಸಿದೆ.
ಕರವಾಳಿಯಲ್ಲಿ ಯಕ್ಷಗಾನ, ದೈವದ ನೇಮೋತ್ಸವ, ಜನಪದ ಕ್ರೀಡೆ ಕಂಬಳ, ನಾಗಮಂಡಲ ದೇವಸ್ಥಾನದ ಜಾತ್ರೆ, ಬ್ರಹ್ಮಕಳಶೋತ್ಸವಗಳು ನಡೆಯೋದೇ ನವೆಂಬರ್ ಬಳಿಕ. ಹೀಗಾಗಿ ಎಲ್ಲ ಬಗೆಯ ಕಲಾವಿದರು ಈ ಸೀಸನ್ ಗೋಸ್ಕರ ಕಾಯುತ್ತಿರುತ್ತಾರೆ.
ಸಾಂಸ್ಕೃತಿಕ ಚಟುವಟಿಕೆಗಳು ರಾತ್ರಿ ವೇಳೆಯಲ್ಲೇ ನಡೆಯೋದರಿಂದ ಕಳೆದ ಎರಡು ವರ್ಷಗಳಲ್ಲಿ ಯಾವ ಕಾರ್ಯಕ್ರಮವೂ ಸರಿಯಾಗಿ ನಡೆಯದೇ ಕಲಾವಿದರು ಹೈರಾಣಾಗಿದ್ದರು. ಈ ಬಾರಿ ಆದ್ರೂ ಕೊರೋನಾ ಕಮ್ಮಿಯಾಗಿ ಎಲ್ಲವೂ ಸುಗಮವಾಗಿ ನೆರವೇರಬಹುದು ಅನ್ನುವಷ್ಟರಲ್ಲೇ ನೈಟ್ ಕರ್ಫ್ಯೂ ಬರ ಸಿಡಿಲು ಬಡಿದಂತಾಗಿದೆ.
ಯಕ್ಷಗಾನ, ನೇಮೋತ್ಸವ ಆರಂಭ ಆಗುವುದೇ ರಾತ್ರಿ ಹತ್ತರ ನಂತರ.ಆದರೆ ಇಂದಿನಿಂದ ರಾತ್ರಿ ಕರ್ಪ್ಯೂ ಪ್ರಾರಂಭಗೊಳ್ಳಲಿದೆ.ಸದ್ಯಕ್ಕೆ ಯಕ್ಷಗಾನ ಮತ್ತಿತರ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿಲ್ಲವಾದರೂ ,ಹತ್ತರ ನಂತರ ಕರ್ಪ್ಯೂ ಇದ್ದರೆ ಜನ ಹೊರಗೆ ಬರೋಲ್ಲ.ಜನ ಬಾರದಿದ್ದರೆ ಯಕ್ಷಗಾನ ,ಕೋಲ ಯಾರಿಗಾಗಿ? ಈಗಾಗಲೇ ಎರಡು ಲಾಕ್ ಡೌನ್ ಹೊಡೆತಗಳಿಂದ ಕಂಗೆಟ್ಟ ಕಲಾವಿದರ ಸಂಕಷ್ಟದ ಕುರಿತು ಖುದ್ದು ಜಿಲ್ಲಾಧಿಕಾರಿ ಬಳಿಯೂ ಸ್ಪಷ್ಟ ಉತ್ತರ ಇಲ್ಲ.
ಸದ್ಯ ಹತ್ತು ದಿನ ಕಾಲ ನೈಟ್ ಕರ್ಫ್ಯೂ ಇದೆ. ಇದು ಕಂಟಿನ್ಯೂ ಆಗುವುದಿಲ್ಲ ಎನ್ನಲಾಗದು. ಒಟ್ಟಾರೆ ,ಹೊಟೇಲು ,ಬಾರ್ ಮತ್ತು ಮನರಂಜನೆ ಉದ್ಯಮದ ಜೊತೆಗೇ ಕಲೆಯನ್ನೇ ನಂಬಿದ ಕಲಾವಿದರು ಮಾತ್ರ ಈ ಬಾರಿಯೂ ತಲೆ ಮೇಲೆ ಕೈ ಇಟ್ಟುಕೊಳ್ಳುವಂತಾಗಿದೆ.
PublicNext
28/12/2021 04:32 pm