ಮಂಗಳೂರು: ಕೊರೊನಾ ಸೋಂಕಿತರಿಗೆ ದಾನಿಗಳು ನೀಡುವ ಪ್ಲಾಸ್ಮಾಕ್ಕೆ ಆಸ್ಪತ್ರೆಗಳು ದುಬಾರಿ ಹಣ ವಿಧಿಸುತ್ತಾ ಇದನ್ನೇ ದಂಧೆಯನ್ನಾಗಿಸಿ ಕೊಂಡು ಬಡವರನ್ನು ಶೋಷಿಸುತ್ತಿದೆ ಎಂದು ಎಸ್ ಡಿಪಿಐ ಆರೋಪಿಸಿದೆ.
ಈ ಸಂಬಂಧ ತನ್ನ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಮಾಹಿತಿ ನೀಡಿರುವ ಎಸ್‌ಡಿಪಿಐ, ದಾನಿಗಳು ತಮ್ಮ ಪ್ಲಾಸ್ಮಾವನ್ನು ದಾನ ಮಾಡಿದ ಬಳಿಕ Apharasis ಎಂಬ ಮೆಶಿನ್ ನಲ್ಲಿ ವರ್ಗೀಕರಣ ಮಾಡಿ ರೋಗಿಗಳಿಗೆ ನೀಡಲಾಗುತ್ತದೆ. ಆದರೆ, ಈ ಪ್ರಕ್ರಿಯೆಗೆ ಬೇಕಾಗುವ ವ್ಯವಸ್ಥೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಇದ್ದರೂ ಸರ್ಕಾರ ಒಂದು ಖಾಸಗಿ ಆಸ್ಪತ್ರೆಗೆ ಅನುಮೋದನೆ ನೀಡಿದೆ. ಈ ಮೂಲಕ ಜಿಲ್ಲೆಯಲ್ಲಿ ಪ್ಲಾಸ್ಮಾ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದೆ.
ಖಾಸಗಿ ಆಸ್ಪತ್ರೆಗಳು, ದಾನಿಗಳು ದಾನವಾಗಿ ನೀಡುವ ಪ್ಲಾಸ್ಮಾ ಕ್ಕೆ 9ರಿಂದ 19 ಸಾವಿರ ರೂ.ವರೆಗೆ ಪಡೆಯುತ್ತಿದೆ ಎಂದು ಆರೋಪಿಸಿದೆ.
ಕೊರೊನಾದಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಪ್ರಸಕ್ತ ಸನ್ನಿವೇಶದಲ್ಲಿ ಬಡವರನ್ನು ದೋಚುತ್ತಿರುವುದನ್ನು ಕಂಡು ಕಾಣದಂತೆ ಮೌನ ವಹಿಸಿ ಸುಮ್ಮನಿರಲು ಸಾಧ್ಯವಿಲ್ಲ ಎಂದಿರುವ ಎಸ್ಡಿಪಿಐ, ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು. ಸರ್ಕಾರಿ ಆಸ್ಪತ್ರೆಯಲ್ಲಿರುವ ಪ್ಲಾಸ್ಮಾ ವರ್ಗೀಕರಿಸುವ Apharasis ಮೆಶಿನ್ ನ್ನು ಚಲಾವಣೆಗೊಳಿಸಿ ರೋಗಿಗಳಿಗೆ ಉಚಿತ ಚಿಕಿತ್ಸೆ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದೆ.
ಇಲ್ಲವಾದಲ್ಲಿ ಎಸ್ಡಿಪಿಐ ಈ ಅಕ್ರಮದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
Kshetra Samachara
18/10/2020 12:23 pm