ಬಂಟ್ವಾಳ: ದ.ಕ.ಜಿಲ್ಲೆಯ ಪ್ರಾಂಶುಪಾಲರೊಬ್ಬರು ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿದ್ದು ಅವರು ಸುರಕ್ಷಿತವಾಗಿ ಮನೆ ಸೇರಲು ಕುಟಂಬಸ್ಥರು ಪ್ರಾರ್ಥಿಸುತ್ತಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ಸಮೀಪದ ನಿವಾಸಿ ಜೆರೊಮ್ ಸಿಕ್ವೇರಾ ಎಸ್.ಜೆ ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿದ್ದು ಮಂಗಳವಾರ ರಾತ್ರಿ ತನ್ನ ಅಣ್ಣನಾದ ಬೆರ್ನಾಡ್ ಸಿಕ್ವೇರಾ ಅವರಿಗೆ ಕರೆಮಾಡಿ ತಾನು ಸುರಕ್ಷಿತವಾಗಿರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾನುವಾರ ಊರಿಗೆ ಬರಲೆಂದು ಏರ್ ಪೋರ್ಟಿಗೆ ಬಂದಿದ್ದರೂ ಅಸಾಧ್ಯವಾಗಿ ಅಲ್ಲೇ ಬಾಕಿಯಾಗಿರುವ ಬಗ್ಗೆಯೂ ಮನೆಮಂದಿಗೆ ತಿಳಿಸಿದ್ದು ತಾನು ಸುರಕ್ಷಿತವಾಗಿ ಮನೆಗೆ ಸೇರುವಂತಾಗಲೂ ತಾವೆಲ್ಲರೂ ಪ್ರಾರ್ಥಿಸುವಂತೆ ವಿನಂತಿಸಿದ್ದಾರೆ.
ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಕಲ್ಕುರಿ ಎಂಬಲ್ಲಿನ ನಿವಾಸಿಗಳಾದ ಅಲ್ಫೊನ್ ಸಿಕ್ವೇರಾ ಮತ್ತು ಐರಿನ್ ಸಿಕ್ವೇರಾ ಅವರ ಏಳು ಮಂದಿ ಮಕ್ಕಳಲ್ಲಿ ಜೆರೊಮ್ ಸಿಕ್ವೇರಾ(೫೨) ಐದನೇಯವರು. ಸಿದ್ಧಕಟ್ಟೆ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಮೂಡಬಿದ್ರೆ ಮಹಾವೀರ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪೂರೈಸಿದ್ದ ಅವರು ನಂತರ ದೇಶ-ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡಿದ್ದರು. ನಂತರ ಅಪ್ಘಾನಿಸ್ತಾನ, ಜಾರ್ಖಂಡ್, ದೆಹಲಿ ಮೊದಲಾದೆಡೆಗಳಲ್ಲಿ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದರು.
ಈ ಹಿಂದೆ ಅಫ್ಘಾನಿಸ್ತಾನದಲ್ಲಿ ಐದು ವರ್ಷಗಳ ಕಾಲವಿದ್ದ ಜೆರೊಮ್ ಸಿಕ್ವೇರಾ ನಂತರ ಜಾಖಂಡ್ ನಲ್ಲಿದ್ದು ಕಳೆದ ಡಿಸೆಂಬರ್ ನಲ್ಲಿ ಸಿದ್ಧಕಟ್ಟೆಯ ಮನೆಗೆ ಬಂದಿದ್ದರು. ಮತ್ತೆ ಅಫ್ಘಾನಿಸ್ತಾನಕ್ಕೆ ಹೋಗಿದ್ದ ಅವರು ಕಳೆದ ಜನವರಿಯಿಂದ ಕಾಬೂಲ್ ನಲ್ಲಿರುವ ಅಂತರಾಷ್ಟ್ರೀಯ ಎನ್ಜಿಓ ಸಂಸ್ಥೆಯಾದ ಜೆಸ್ಯೂಟ್ ರೆಪ್ಯೂಜಿ ಸರ್ವಿಸಸ್(ಜೆಆರ್ಎಸ್)ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ನಡೆಯುತ್ತಿರುವುದರಿಂದ ಅಲ್ಲಿರುವ ಭಾರತೀಯರನ್ನು ಭಾರತೀಯ ವಾಯುಸೇನೆ ತಾಯ್ನಾಡಿಗೆ ಕಳುಹಿಸುತ್ತಿದ್ದು ಈ ಮಧ್ಯೆ ಊರಿಗೆ ಬರಲೆಂದು ಭಾನುವಾರ ಜೆರೊಮ್ ಸಿಕ್ವೇರಾ ತನ್ನ ಸ್ನೇಹಿತ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ನಿವಾಸಿ ರಾಬಟ್ ರೊಡ್ರಿಗಸ್ ಅವರೊಂದಿಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಬೆಳಿಗ್ಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದರೂ ಆ ಹೊತ್ತಿಗೆ ತಾಲಿಬಾನಿಗರು ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡು ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನು ಚದುರಿಸಿದ ಪರಿಣಾಮ ಊರಿಗೆ ಬರಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ. ಮಂಗಳವಾರ ಜೆರೊಮ್ ಸಿಕ್ವೇರಾ ಅವರು ತನ್ನ ಅಣ್ಣ ಬೆರ್ನಾಡ್ ಸಿಕ್ವೇರಾ ಅವರಿಗೆ ಕರೆ ಮಾಡಿ ಮಾತಾಡಿದ್ದಾರೆ. ’ನಾನು ಕಾಬೂಲ್ ಬಳಿಯ ಸ್ಥಳದಲ್ಲಿ ತಂಗಿದ್ದೇನೆ. ಸುರಕ್ಷಿತವಾಗಿದ್ದೇನೆ ಎಂದಿದ್ದಾರೆ.
Kshetra Samachara
19/08/2021 02:29 pm