ಬ್ರಹ್ಮಾವರ: ಜನವಸತಿ, ನದಿ, ಕೃಷಿ ಭೂಮಿಗೆ ಹೊಂದಿಕೊಂಡು ಇರುವ ಹೇರೂರು ಗ್ರಾಮದ ವ್ಯಾಪ್ತಿಯ ಕೃಷಿ ಕೇಂದ್ರದಲ್ಲಿ ತ್ಯಾಜ್ಯ ಘಟಕ ಮಾಡಲು ಉದ್ದೇಶಿಸಿಸುವುದನ್ನು ವಿರೋಧಿಸಿ ಗ್ರಾಮಸ್ಥರು ಪಕ್ಷ ಬೇಧ ಮರೆತು ಗುರುವಾರ ಪ್ರತಿಭಟನೆ ಮಾಡಿದ್ದಾರೆ.
ಹೇರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿಯಿಂದ ಸಹಸ್ರಾರು ಮಂದಿ ಕಾಲು ನಡಿಗೆಯಲ್ಲಿ ಗ್ರಾಮ ಪಂಚಾಯತಿಯ ನಿರ್ಣಯವನ್ನು ವಿರೋಧಿಸಿ ಕೃಷಿ ಕೇಂದ್ರದ ಅಧಿಕಾರಿಗಳಿಗೆ ಮನವಿ ನೀಡಿದರು. ಬಳಿಕ ಚಾಂತಾರು ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕುವ ಸಿದ್ಧತೆಯಲ್ಲಿದ್ದರು. ಗ್ರಾಮಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರು ಆಗಮಿಸಿ ಗ್ರಾಮಸ್ಥರೊಂದಿಗೆ ಮಾತು ಕಥೆ ನಡೆಸಿದರು. ಈಗಾಗಲೇ ಕೈಗೊಂಡ ನಿರ್ಣಯವನ್ನು ಬಿಟ್ಟು ಹೆರೂರಿನಲ್ಲಿ ಗ್ರಾಮ ಸಭೆ ಕರೆದು ಆಬಳಿಕ ನಿರ್ಣಯ ಕೈಗೊಳ್ಳುವಂತೆ ಜನರು ಒತ್ತಾಯಿಸಿ ಮನವಿ ನೀಡಿದರು.
ಈ ಸಂದರ್ಭ ಪ್ರತಿಭಟನೆಯಲ್ಲಿ ಜ್ಞಾನ ವಸಂತ ಶೆಟ್ಟಿ ಮಾತನಾಡಿ ಜನಪ್ರತಿನಿಧಿಗಳು , ಸರಕಾರಿ ಅಧಿಕಾರಿಗಳು ಕೆಲವು ಅವಧಿಗೆ ಮಾತ್ರ ಸಿಮೀತವಾಗಿ ಇರುತ್ತಾರೆ. ಆದರೆ ಗ್ರಾಮದ ಜನರು ಸದಾ ಇಲ್ಲಿಯೇ ವಾಸ ಮಾಡಬೇಕು. ಜನರು ಇದ್ದರೆ ಮಾತ್ರ ಜನಪ್ರತಿನಿಧಿಗಳು. ಜನವಿರೋಧಿ ತ್ಯಾಜ್ಯ ಘಟಕವನ್ನು ಯಾವುದೇ ಕಾರಣಕ್ಕೂ ಮಾಡಲು ಬಿಡುವುದಿಲ್ಲ ಎಂದರು.
ಪ್ರತಿಭಟನಾ ಜಾಥಾದಲ್ಲಿ ಡೋಲು ವಾದನ, ಕಪ್ಪು ಬಾವುಟ ಇತ್ತು. ಪ್ರತಿಭಟನೆಯ ನೇತೃತ್ವ ವಹಿಸಿದ ಸತೀಶ್ ಕಾಡೋಳಿ, ಹೆನ್ಸಿಲ್ ಡಿಸೋಜ, ತೋಮಸ್ ಹೇರೂರು ವಾರ್ಡ್‍ನಿಂದ ಚುನಾಯಿತ ಗ್ರಾಮ ಪಂಚಾಯತಿ ಸದಸ್ಯರುಗಳು ಪರಿಸರದ ಉಗ್ಗೇಲ್ ಬೆಟ್ಟು ಗ್ರಾಮಸ್ಥರು ಪ್ರತಿಭಟನೆಯಲ್ಲಿದ್ದರು. ಬ್ರಹ್ಮಾವರ ಪೋಲೀಸ್ ಠಾಣಾಧಿಕಾರಿ ಗುರುನಾಥ್ ಬಿ ಹಾದಿಮನೆ ಸೂಕ್ತ ಬಂದೋಬಸ್ತ್ ಮಾಡಿದ್ದರು.
Kshetra Samachara
29/09/2022 10:46 pm