ಉಡುಪಿ: ಪ್ರಸಿದ್ಧ ಪ್ರವಾಸಿ ತಾಣ ಉಡುಪಿ ಜಿಲ್ಲೆಗೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಪ್ರವಾಸಿಗರು ಬರುತ್ತಾರೆ. ಹೀಗೆ ಬರುವ ಪ್ರವಾಸಿಗರಿಗೆ ಹೊಂಡ–ಗುಂಡಿಗಳು ಸ್ವಾಗತ ಕೋರುತ್ತಿವೆ.ನಗರ ಮಾತ್ರವಲ್ಲದೆ ಗ್ರಾಮೀಣ ರಸ್ತೆಗಳೂ ತೀರ ಹದಗೆಟ್ಟಿದ್ದು ವಾಹನ ಸವಾರರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಜೂನ್ ಜುಲೈ ತಿಂಗಳ ಮಹಾಮಳೆಗೆ ನಗರ ಮತ್ತು ಗ್ರಾಮೀಣ ಭಾಗದ ರಸ್ತೆಗಳು ಬಹುತೇಕ ಹದಗೆಟ್ಟಿವೆ.ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಮಂಗಳೂರು ಕಡೆಯಿಂದ ಮಲ್ಪೆ ಹಾಗೂ ಉಡುಪಿಗೆ ಬರುವ ವಾಹನಗಳಿಗೆ ಕರಾವಳಿ ಜಂಕ್ಷನ್‌ನಲ್ಲಿರುವ ದೈತ್ಯ ಗುಂಡಿಗಳು ಬರಮಾಡಿಕೊಳ್ಳುತ್ತವೆ. ಹಾಗೆಯೇ, 169 ‘ಎ’ ಮಾರ್ಗವಾಗಿ ಶಿವಮೊಗ್ಗ ಕಡೆಯಿಂದ ಬರುವ ವಾಹನಗಳಿಗೆ ಮಣಿಪಾಲ ಸಮೀಪದ ಪರ್ಕಳದ ಗುಂಡಿಗಳು ಎದುರುಗೊಳ್ಳುತ್ತವೆ. ಜಿಲ್ಲೆಯ ಸೌಂದರ್ಯ ಸವಿಯಲು ಬರುವ ಪ್ರವಾಸಿಗರಿಗೆ ಹದಗೆಟ್ಟ ರಸ್ತೆಗಳಿಂದ ಕಿರಿಕಿರಿ ಉಂಟಾಗುತ್ತಿದೆ.
ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಪ್ರಮುಖ ರಸ್ತೆಗಳು, ಮುಖ್ಯ ವೃತ್ತಗಳಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಇದರಿಂದ ವಾಹನ ಸವಾರರಿಗೆ ನಿತ್ಯ ನರಕಯಾತನೆ. ಇಂದ್ರಾಳಿ ಬಳಿ ರಸ್ತೆಯೇ ಕಾಣದಷ್ಟು ಗುಂಡಿಗಳಿವೆ. ಸಣ್ಣ ಮಳೆ ಸುರಿದರೂ ಗುಂಡಿಗಳು ತುಂಬಿಕೊಳ್ಳುತ್ತಿದ್ದು, ಇದರ ಅರಿವಿಲ್ಲದೆ ವಾಹನ ಸವಾರರು ಬಿದ್ದು ಆಸ್ಪತ್ರೆಗೆ ಸೇರುವಂತಾಗಿದೆ.
ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾಗೆ ಹೋಗುವ ರಸ್ತೆ ದೇವರಿಗೇ ಪ್ರೀತಿ.ಇಲ್ಲಿ ಸವಾರರಿಗೆ ಹೊಂಡ ತಪ್ಪಿಸುವುದೇ ದೊಡ್ಡ ಸವಾಲು. ಜನಪ್ರತಿನಿಧಿಗಳನ್ನು ಕೇಳಿದರೆ ಮಳೆ ನಿಂತ ನಂತರ ದುರಸ್ತಿ ಅಂತಾರೆ. ಹಾಗಾದರೆ ,ಅಲ್ಲಿಯತನಕ ಕೆಸರು ರಸ್ತೆಯನ್ನು ಸಹಿಸಿಕೊಳ್ಳಬೇಕೆ ಎಂಬುದು ತೆರಿಗೆ ಕಟ್ಟುವ ಜನರ ಪ್ರಶ್ನೆಯಾಗಿದೆ.
Kshetra Samachara
15/07/2022 07:58 pm