ಸುಳ್ಯ: ಸುಳ್ಯದ ಬಹು ನಿರೀಕ್ಷಿತ 110 ಕೆವಿ ಸಬ್ ಸ್ಟೇಷನ್ ಕಾಮಗಾರಿ ಆರಂಭಿಸಲು ಇದ್ದ ಎಲ್ಲಾ ಅಡ್ಡಿ ಆತಂಕ ನಿವಾರಣೆಯಾಗಿದೆ. ಮಾಡಾವಿನಿಂದ ಸುಳ್ಯಕ್ಕೆ ಹಾದು ಬರುವ 110 ಕೆ.ವಿ. ಸಬ್ ಸ್ಟೇಷನ್ ಲೇನ್ ಅರಣ್ಯ ಮೂಲಕ ಎಳೆಯಲು ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಿದೆ. ಈ ನಿರ್ಮಾಣ ಕಾರ್ಯ ಸದ್ಯದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವ ಎಸ್.ಅಂಗಾರ ಹೇಳಿದ್ದಾರೆ.
ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಅರಣ್ಯ ಇಲಾಖೆ ಮತ್ತಿತರ ಸಮಸ್ಯೆಗಳಿಂದ 18 ವರ್ಷಗಳಿಂದ 110 ಕೆ.ವಿ. ಸಬ್ ಸ್ಟೇಷನ್ ನನೆಗುದಿಗೆ ಬಿದ್ದಿತ್ತು. ಇದರಿಂದ ಸುಳ್ಯಕ್ಕೆ ಗುಣಮಟ್ಟದ ವಿದ್ಯುತ್ ನೀಡಲು 110 ಕೆ.ವಿ. ಸಬ್ ಸ್ಟೇಷನ್ ನಿರ್ಮಿಸಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಇಂಧನ ಸಚಿವ ಸುನಿಲ್ ಕುಮಾರ್, ಅರಣ್ಯ ಸಚಿವ ಉಮೇಶ್ ಕತ್ತಿ ಸಮ್ಮುಖದಲ್ಲಿ ಇತ್ತೀಚೆಗೆ ಸಭೆ ನಡೆಸಿ ಅನುಮತಿ ನೀಡುವಂತೆ ಕೇಂದ್ರದ ಪರಿಸರ ಇಲಾಖೆಯ ರೀಜನಲ್ ಎಂಪವರ್ಡ್ ಕಮಿಟಿ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಸಮಸ್ಯೆಯನ್ನು ಸಿಎಂ ಗಮನಕ್ಕೆ ತರಲಾಗಿದ್ದು, ಸಮಸ್ಯೆ ಪರಿಹರಿಸುವಂತೆ ಸಿಎಂ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪರಿಸರ ಇಲಾಖೆಯ ಉನ್ನತ ಮಟ್ಟದ ಸಮಿತಿ ಪರಿಶೀಲನೆ ನಡೆಸಿ ಅನುಮತಿ ನೀಡಿದೆ. ಪರಿಸರ ಇಲಾಖೆಯ ಮಾರ್ಗನಿರ್ದೇಶನ ಪಾಲಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
ಸರಕಾರದ ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ನಡೆದು ಸಬ್ ಸ್ಟೇಷನ್ ಕಾಮಗಾರಿ ಆರಂಭಿಸಲಾಗುವುದು. ಈ ಮೂಲಕ ಸುಳ್ಯದ ವಿದ್ಯುತ್ ಸಮಸ್ಯೆ ಪರಿಹಾರವಾಗುವುದರ ಜೊತೆಗೆ ಈ ಕುರಿತ ಎಲ್ಲಾ ಆರೋಪ, ಟೀಕೆಗೆ ಉತ್ತರ ನೀಡಿದಂತಾಗಿದೆ ಎಂದು ಸಚಿವರು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ನಪಂ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
05/07/2022 08:56 pm