ಹಳೆಯಂಗಡಿ: ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳುವೈಲು ರಸ್ತೆಯ ಪಡುಹಿತ್ಲು ಎಂಬಲ್ಲಿ ಕೆರೆಗೆ ಪಂಚಾಯತ್ ವತಿಯಿಂದ ತಡೆ ಬೇಲಿ ಹಾಕಿದ್ದು, ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯ ನಾಗರಿಕರು ಆರೋಪಿಸಿದ್ದಾರೆ.
ಹಳೆಯಂಗಡಿ ಕೊಳುವೈಲು ಪ್ರಧಾನ ರಸ್ತೆಗೆ ತಾಗಿಕೊಂಡೇ ಆಳವಾದ ಕೆರೆ ಇದ್ದು, ಕೆಲ ತಿಂಗಳ ಹಿಂದೆ ವ್ಯಕ್ತಿಯೊಬ್ಬರು ಬಿದ್ದು ಮೃತಪಟ್ಟಿದ್ದರು. ಬಳಿಕ ಸ್ಥಳೀಯರ ಆಗ್ರಹಕ್ಕೆ ಮಣಿದು ಪಂಚಾಯತ್ ಮೂಲಕ ಕಾಟಾಚಾರಕ್ಕೆ ಕೆರೆ ಬದಿಗೆ ಕಬ್ಬಿಣದ ರಾಡ್ ಅಳವಡಿಸಿ ಬಟ್ಟೆ ಬೇಲಿ ಹಾಕಲಾಗಿತ್ತು. ಆದರೆ, ಕೆಲದಿನಗಳ ಹಿಂದೆ ಕಬ್ಬಿಣದ ರಾಡ್ ಕೆಳಗಡೆ ಹಾಕಿದ್ದ ಕಾಂಕ್ರೀಟ್ ಎದ್ದುಹೋಗಿ ಬಟ್ಟೆಯ ತಡೆಬೇಲಿ ಕುಸಿದಿದೆ.
ಕಳಪೆ ಕಾಮಗಾರಿ ಬಗ್ಗೆ ಈಗಾಗಲೇ ಪಂಚಾಯತ್ ಅಧ್ಯಕ್ಷರಿಗೆ ತಿಳಿಸಲಾಗಿದ್ದು ಅಪಾಯ ಸಂಭವಿಸುವ ಮೊದಲೇ ಸರಿಪಡಿಸುವಂತೆ ಸ್ಥಳೀಯ ಪಂಚಾಯತ್ ಸದಸ್ಯ ಸತೀಶ್ ಕೋಟ್ಯಾನ್ ಆಗ್ರಹಿಸಿದ್ದಾರೆ.
Kshetra Samachara
20/06/2022 05:56 pm