ಉಪ್ಪಿನಂಗಡಿ: ಶಾಸಕ ಸಂಜೀವ ಮಠಂದೂರು ಅವರ ಸ್ವಗ್ರಾಮವಾದ ಹಿರೇಬಂಡಾಡಿಯಲ್ಲಿ ರಸ್ತೆಗಳು ತೀರಾ ಹದಗೆಟ್ಟು ಜನ, ವಾಹನ ಸಂಚಾರಕ್ಕೆ ಅಯೋಗ್ಯವಾವೆ. ರಸ್ತೆಯನ್ನು ಶೀಘ್ರವೇ ದುರಸ್ತಿ ಪಡಿಸಿಕೊಡಬೇಕು ಎಂದು ಆಗ್ರಹಿಸಿ ಸ್ತ್ರೀ ಶಕ್ತಿ ಸಂಘಟನೆಯ ಸದಸ್ಯರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಮುಂದಿನ ಚುನಾವಣೆಯ ಮೊದಲು ಹದಗೆಟ್ಟಿರುವ ಶ್ರೀ ಷಣ್ಮುಖ ದೇವಾಲಯ ರಸ್ತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಮುಂಬರುವ ಚುನಾವಣೆಯನ್ನು ಈ ಭಾಗದವರು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು. ಹಿರೇಬಂಡಾಡಿ ಗ್ರಾ.ಪಂ. ಎದುರು ಪ್ರತಿಭಟನೆ ನಡೆಸಿದ ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಹಾಗೂ ಸ್ಥಳೀಯರು, ಮುರದಮೇಲು- ಶ್ರೀ ಷಣ್ಮುಖ ದೇವಸ್ಥಾನ ರಸ್ತೆಯು ತೀರಾ ಹದಗೆಟ್ಟಿದ್ದು, ಈಗ ಬಂದಿರುವ ಮಳೆಗೆ ಸಂಪೂರ್ಣ ಕೆಸರುಮಯವಾಗಿದೆ. ಇದರಿಂದ ನಡೆದುಕೊಂಡು ಹೋಗದ ಸ್ಥಿತಿ ಇಲ್ಲಿದ್ದು, ಇದರಿಂದ ಮಕ್ಕಳಿಗೆ ಶಾಲೆಗೆ ಹೋಗಲಿಕ್ಕೂ ಸಮಸ್ಯೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸ್ಥಳೀಯರಾದ ಚೆನ್ನಕೇಶವ ಕನ್ಯಾನ, ಈ ರಸ್ತೆಯ ಬಗ್ಗೆ ಹಲವು ಬಾರಿ ಗ್ರಾಮ ಸಭೆಗಳಲ್ಲಿ ಪ್ರಸ್ತಾಪ ಮಾಡಿದ್ದೇವೆ. ಆದರೂ ಇದಕ್ಕೆ ಪರಿಹಾರ ಸಿಕ್ಕಿಲ್ಲ. ಆದ್ದರಿಂದಾಗಿ ಈಗ ಮಳೆ ಬಂದು ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಇದರಿಂದ ಈ ರಸ್ತೆಯಲ್ಲಿ ನಡೆದಾಡಲು ಕಷ್ಟವಾಗಿದ್ದು, ದೇವಾಲಯಕ್ಕೆ ತೆರಳುವ ಭಕ್ತಾದಿಗಳಿಗೂ ತೊಂದರೆಯಾಗಿದೆ. ಇದು ಯಾವುದೇ ರಾಜಕೀಯ ಪ್ರೇರಿತ ಪ್ರತಿಭಟನೆ ಅಲ್ಲ. ಇದು ನಮ್ಮ ಮೂಲ ಸೌಕರ್ಯಕೋಸ್ಕರ ಮಾಡುತ್ತಿರುವ ಪ್ರತಿಭಟನೆ. ಆದ್ದರಿಂದ ಜನಪ್ರತಿನಿಧಿಗಳು ಶೀಘ್ರವಾಗಿ ಈ ರಸ್ತೆಯನ್ನು ದುರಸ್ತಿ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಅಲ್ಲಿಯ ಮಣ್ಣನ್ನು ತೆಗೆದು, ಚರಂಡಿಯನ್ನು ಮಾಡಿ ನಾಳೆಯೇ ಅಲ್ಲಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡಲಾಗುವುದು ಹಾಗೂ ಶಾಶ್ವತ ಕಾಮಗಾರಿಯ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗ್ರಾ.ಪಂ. ಪಿಡಿಒ ದಿನೇಶ್ ಶೆಟ್ಟಿಯವರು ಭರವಸೆ ನೀಡಿದರು. ಬಳಿಕ ಗ್ರಾ.ಪಂ. ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಭವಾನಿ ಅವರಿಗೆ ಮನವಿ ನೀಡಿದ ಪ್ರತಿಭಟನಕಾರರು, ಮುಂದಿನ ಚುನಾವಣೆಯ ಮೊದಲು ಹದಗೆಟ್ಟಿರುವ ಈ ರಸ್ತೆಗೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಮುಂಬರುವ ಚುನಾವಣೆಯನ್ನು ಈ ಭಾಗದವರು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭ ಗ್ರಾ.ಪಂ. ಕಾರ್ಯದರ್ಶಿ ಪರಮೇಶ್ವರ, ಸದಸ್ಯರಾದ ಹಮ್ಮಬ್ಬ ಶೌಕತ್ ಅಲಿ, ನಿತಿನ್ ತಾರಿತ್ತಡಿ, ಹೇಮಂತ್ ಮೈತ್ತಳಿಕೆ, ಸತೀಶ್ ಹೆನ್ನಾಳ, ಲಕ್ಷ್ಮೀಶ ನಿಡ್ಡೆಂಕಿ ಉಪಸ್ಥಿತರಿದ್ದರು. ಪ್ರತಿಭಟನೆಯಲ್ಲಿ ಸ್ತ್ರೀ ಶಕ್ತಿ ಸಂಘದ ರಮ್ಯಜ್ಯೋತಿ, ರಾಜಿತಾ, ಸುಮಲತಾ, ಭವ್ಯ ಎಚ್., ಉಮಾವತಿ, ತಿಮ್ಮಕ್ಕ ಗ್ರಾಮಸ್ಥರಾದ ಜನಾರ್ದನ ಹೊಸಮನೆ ಉಪಸ್ಥಿತರಿದ್ದರು.
Kshetra Samachara
17/05/2022 09:19 pm