ಮಂಗಳೂರು: ಹುಬ್ಬಳ್ಳಿಯಿಂದ ಮಂಗಳೂರು ನಡುವೆ ವಿಮಾನಯಾನ ಸೇವೆ ಆರಂಭವಾಗಿದ್ದು, ಕಾರ್ಮಿಕರ ದಿನವಾದ ಇಂದು ಹುಬ್ಬಳ್ಳಿಯಿಂದ ಮೊದಲ ವಿಮಾನವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದೆ.
ಇಂಡಿಗೋ ವಿಮಾನ ಸಂಸ್ಥೆಯು ಹುಬ್ಬಳ್ಳಿ - ಮಂಗಳೂರು ನಡುವೆ ಹೊಸದಾಗಿ ವಿಮಾನ ಹಾರಾಟ ಮಾಡಲು ಮುಂದಾಗಿದೆ. ಈ ಮೊದಲ ವಿಮಾನಯಾನದಲ್ಲಿ ಒಟ್ಟು 46 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ. ಇವರಲ್ಲಿ 36 ಮಂದಿ ಪ್ರಯಾಣಿಕರು ಮರು ಪ್ರಯಾಣದ ಟಿಕೆಟ್ ಅನ್ನೂ ಕಾಯ್ದಿರಿಸಿದ್ದಾರೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸಂಜೆ 5.15ಕ್ಕೆ ಟೇಕಾಫ್ ಆದ ಈ ಇಂಡಿಗೋ ವಿಮಾನವು ಸಂಜೆ 6.15ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿತು. ಅದೇ ರೀತಿ ಮಂಗಳೂರಿನಿಂದ ಸಂಜೆ 6.35ಕ್ಕೆ ಟೇಕಾಫ್ ಆದ ವಿಮಾನವು ರಾತ್ರಿ 7.40ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ರವಿವಾರ, ಸೋಮವಾರ , ಬುಧವಾರ ಹಾಗೂ ಶುಕ್ರವಾರ ಸೇರಿದಂತೆ ವಾರದಲ್ಲಿ 4 ದಿನಗಳು ಮಾತ್ರ ಈ ವಿಮಾನಯಾನ ಸೇವೆ ಇರಲಿದೆ.
ಇಂಡಿಗೋ ವಿಮಾನವು ಹುಬ್ಬಳ್ಳಿಯ ಪ್ರಯಾಣಿಕರಿಗೆ ಪ್ರತ್ಯೇಕವಾಗಿ ಚೆಕ್ ಇನ್ ಕೌಂಟರ್ ಅನ್ನು ಮೀಸಲಿಡುವ ಮೂಲಕ ಸಂಭ್ರಮ ಆಚರಣೆ ಮಾಡಿತ್ತು. ಅಲ್ಲದೆ ಏರ್ಲೈನ್ ಸಾಂಪ್ರದಾಯಿಕ ದೀಪವನ್ನು ಬೆಳಗಿಸಿ, ಕೇಕ್ ಕತ್ತರಿಸಿ ಪ್ರಯಾಣಿಕರೊಂದಿಗೆ ಹಬ್ಬದ ಸಂಭ್ರಮವನ್ನು ಆಚರಿಸಿತು. ವಿಮಾನದಲ್ಲಿ ಆಗಮಿಸಿರುವ ಪ್ರಯಾಣಿಕರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಕೇಕ್ ಸವಿದು ಸಂಭ್ರಮಪಟ್ಟರು.
PublicNext
01/05/2022 10:48 pm