ಬ್ರಹ್ಮಾವರ: ಬ್ರಹ್ಮಾವರ - ಬಾರ್ಕೂರು ರಸ್ತೆ ಅಗಲೀಕರಣ ಆಗಬೇಕೆಂಬ ಬೇಡಿಕೆ ಹಲವು ವರ್ಷಗಳದ್ದು. ಆದರೆ ಇದು ಕಾರ್ಯಗತಗೊಳ್ಳುವುದು ಮರೀಚಿಕೆಯಾಗಿಯೇ ಉಳಿದಿದೆ. ಇಲ್ಲಿ ವಾಹನ ದಟ್ಟಣೆ ಹೆಚ್ಚಳದಿಂದ ದಿನದಿಂದ ದಿನಕ್ಕೆ ಅಫಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
ನಿನ್ನೆ ಲಾರಿಯೊಂದು ಇಲ್ಲಿನ ಕಚ್ಚೂರು ಬಸ್ ನಿಲ್ದಾಣದ ಬಳಿ ಚಾಲಕನ ನಿಯಂತ್ರಣ ತಪ್ಪಿ ಭಾರೀ ದುರಂತ ನಡೆಯುವುದು ತಪ್ಪಿದೆ. ಬದಿಯಲ್ಲಿ ಹಾಕಿದ್ದ ಗಾರ್ಡ್ ಮತ್ತು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಸ್ ನಿಂತ ಕಾರಣ ಸಾವು ನೋವು ಸಂಭವಿಸಲಿಲ್ಲ. ಅಪಘಾತದ ಪರಿಣಾಮವಾಗಿ ಕೆಲಹೊತ್ತು ಕರೆಂಟ್ ವ್ಯತ್ಯಯಗೊಂಡು ರಸ್ತೆ ಸಂಚಾರಕ್ಕೆ ತೊಡಕಾಗಿತ್ತು.
ಇದು ಇಲ್ಲಿನ ನಿತ್ಯದ ಸಮಸ್ಯೆ. ಆಸುಪಾಸಿನ ಮನೆಯವರಿಗೆ ಮತ್ತು ವಾಹನ ಸವಾರರಿಗೆ ಇಲ್ಲಿ ಅತ್ತಿಂದಿತ್ತ ಸಂಚರಿಸಲೂ ಕಷ್ಟವಾಗುತ್ತಿದೆ. ಇನ್ನು ರಾತ್ರಿಯಾದರೆ ಕೇಳುವುದೇ ಬೇಡ, ಕತ್ತಲಲ್ಲಿ ಅವೆಷ್ಟೋ ಅವಘಡಗಳಾಗಿವೆ. ಬಾರಕೂರು ಸೀತಾನದಿ ಸೇತುವೆ ತನಕ ಕುಂದಾಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಬರುತ್ತಿದ್ದು ಹಂದಾಡಿ ಭಾಗ ಉಡುಪಿ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ಆದರೆ ಹಂದಾಡಿ ಭಾಗದಲ್ಲಿ ರಸ್ತೆ ಅಗಲೀಕರಣ ಆಗುತ್ತಿದೆ. ಅದೇ ರೀತಿ ಬಾರಕೂರು ಭಾಗದಲ್ಲಿ ಅಗಲೀಕರಣವಾದಲ್ಲಿ ಸುಗಮ ಸಂಚಾರಕ್ಕೆ ಅನುವು ಆಗುವುದರ ಜೊತೆಗೆ ಸ್ಥಳೀಯರಿಗಾಗುತ್ತಿರುವ ತೊಂದರೆ ತಪ್ಪುತ್ತದೆ. ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸಬೇಕಿದೆ.
Kshetra Samachara
23/04/2022 10:41 pm