ಬಂಟ್ವಾಳ: ಹಿಂದು ಜಾಗರಣಾ ವೇದಿಕೆಯಿಂದ ಜ.14ರಿಂದ ಮನೆ ಮನೆ ಸಂಪರ್ಕ ಜನಜಾಗರಣಾ ಅಭಿಯಾನ ನಡೆಯಲಿದೆ. ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಹಿಂಜಾವೇ ದಕ್ಷಿಣ ಪ್ರಾಂತ ಪ್ರಮುಖ ರಾಧಾಕೃಷ್ಣ ಅಡ್ಯಂತಾಯ ಈ ಕುರಿತು ಮಾಹಿತಿ ನೀಡಿ, ಹಿಂಜಾವೇ ಬಂಟ್ವಾಳ ತಾಲೂಕು, ಶ್ರೀ ಕಾರಿಂಜೇಶ್ವರ ಕ್ಷೇತ್ರ ರಕ್ಷಣಾ ಸಮಿತಿ ವತಿಯಿಂದ ಯತಿಗಳ ಮಾರ್ಗದರ್ಶನದೊಂದಿಗೆ ಹೋರಾಟದ ಮೂರನೇ ಘಟ್ಟವಾಗಿ ಮನೆಮನೆ ಸಂಪರ್ಕ ಅಭಿಯಾನ ನಡೆಸಲಾಗುತ್ತದೆ. ಕಾರಿಂಜದಲ್ಲಿ ರುದ್ರಗಿರಿಯ ರಣಕಹಳೆ ಎಂಬ ಅಭಿಯಾನವನ್ನು ಮೊದಲ ಹಂತದಲ್ಲಿ ಕೈಗೊಂಡಿದ್ದೆವು,ಬಳಿಕ ಭಕ್ತರ ನಡಿಗೆ ಜಿಲ್ಲಾಡಳಿತ ಕಡೆಗೆ ಕೈಗೊಳ್ಳಲಾಗಿತ್ತು.
ಆದರೂ ಸ್ಫೋಟಕ ಬಳಸಿ ಗಣಿಗಾರಿಕೆ ನಡೆಯುತ್ತಿದ್ದು, ಸರ್ಕಾರ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳಿಗೆ ಕಾರಿಂಜೇಶ್ವರ ಕ್ಷೇತ್ರದ 10 ಕಿ.ಮೀ. ವ್ಯಾಪ್ತಿಯನ್ನು ಧಾರ್ಮಿಕ ಸೂಕ್ಷ್ಮ ವಲಯ ಎಂದು ಘೋಷಿಸಿ, ಅಲ್ಲಿ ಗಣಿಗಾರಿಕೆಯನ್ನು ಸಂಪೂರ್ಣ ನಿಷೇಧಿಸಬೇಕು, ಅಲ್ಲಿನ ಪಾವಿತ್ರ್ಯತೆ ಉಳಿಸಬೇಕು ಎಂಬ ಹಿನ್ನೆಲೆಯಲ್ಲಿ ಅಭಿಯಾನ ಕೈಗೊಳ್ಳಲಾಗಿದೆ. ಒಂದೆಡೆ ಕಾನೂನು ರೀತ್ಯಾ ಹೋರಾಟವನ್ನೂ ನಡೆಸಲಾಗುತ್ತಿದೆ.
ಇದು ಯಾರದ್ದೇ ವಿರುದ್ಧವಲ್ಲ, ಹಿಂದುಗಳ ಪವಿತ್ರ ಕ್ಷೇತ್ರವಾದ ಕಾರಿಂಜವನ್ನು ಉಳಿಸಲು ಈ ಹೋರಾಟ ನಡೆಸಲಾಗುತ್ತಿದ್ದು, ಬೇಡಿಕೆ ಈಡೇರದೇ ಇದ್ದಲ್ಲಿ ಆಮರಣಾಂತ ಉಪವಾಸ ಕೈಗೊಳ್ಳಲೂ ಸಿದ್ಧ, ಗಣಿಗಾರಿಕೆ ನಿಲ್ಲಿಸುವ ನಮ್ಮ ಉದ್ದೇಶ ಅಚಲವಾಗಿದೆ ಎಂದರು.
ಜನವರಿ 14ರಿಂದ ಆರಂಭಗೊಂಡು 21ರವರೆಗೆ ಇಡೀ ಬಂಟ್ವಾಳ ತಾಲೂಕಿನಲ್ಲಿ ಹಿಂದುಗಳ ಮನೆಗಳಿಗೆ ಅಭಿಯಾನ ತೆರಳಲಾಗುವುದು ಎಂದವರು ಹೇಳಿದರು. ವಿಭಾಗ ಸಂಪರ್ಕ ಪ್ರಮುಖ್ ರತ್ನಾಕರ ಶೆಟ್ಟಿ ಕಲ್ಲಡ್ಕ, ಹಿಂಜಾವೇ ಪುತ್ತೂರು ಜಿಲ್ಲಾಧ್ಯಕ್ಷ ಜಗದೀಶ ನೆತ್ತರಕೆರೆ, ಪುತ್ತೂರು ಜಿಲ್ಲಾ ಕಾರ್ಯದರ್ಶಿ ನರಸಿಂಹ ಮಾಣಿ, ಬಂಟ್ವಾಳ ತಾಲೂಕು ಕಾರ್ಯದರ್ಶಿ ಯೋಗೀಶ್ ಕುಮ್ಡೇಲು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Kshetra Samachara
13/01/2022 05:37 pm